ಭದ್ರಾವತಿ: ನೀರಿನ ಮೂಲ ಇರುವ ಪ್ರದೇಶಗಳಲ್ಲಿ ನಗರ ನಿರ್ಮಾಣ ಆಗುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಆದರೆ ನೀರಿನ ಮೂಲಗಳಿಲ್ಲದ ಪ್ರದೇಶದಲ್ಲಿ 216 ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ತಾಲೂಕು ಒಕ್ಕಲಿಗರ ಸಂಘದಿಂದ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಾಡನ್ನು ನಿರ್ಮಾಣ ಮಾಡುವಲ್ಲಿ ಅವರ ದೂರದೃಷ್ಟಿ ಸಾಮರ್ಥ್ಯ ಅರಿವಾಗುತ್ತದೆ. ಆದರೆ ಇಂದು ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗಿ ಮನೆಗಳು ನೀರಿನಲ್ಲಿ ಮುಳಗುತ್ತದೆ. ಇದರ ಕಾರಣವನ್ನು ಸರ್ಕಾರವೇ ಹೇಳಬೇಕು ಎಂದರು. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್ ಮಾತನಾಡಿ, ಬಾಲ್ಯದಲ್ಲಿ ತಂದೆಯೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ಕೆಂಪೇಗೌಡರು ಅಲ್ಲಿನ ವೈಭವ ಕಂಡು ಮುಂದೊಂದು ದಿನ ಇಂತಹ ನಾಡನ್ನು ಕಟ್ಟಬೇಕು ಎಂದು ನಿಶ್ಚಯಿಸಿಕೊಂಡಿದ್ದರು. ಅದರಂತೆ ಮುಂದೆ ಬೆಂಗಳೂರು ನಿರ್ಮಾಣ ಮಾಡಿದರು. 22 ವರ್ಷ ಆಡಳಿತ ನಡೆಸಿದರು ಎಂದು ಹೇಳಿದರು. ತಮ್ಮ ಆಡಳಿತದಲ್ಲಿ ಜಾತಿ ಮತ ಧರ್ಮದ ಎಲ್ಲೆ ಮೀರಿ ಆಡಳಿತ ನಡೆಸಿದ ಕೆಂಪೇಗೌಡರು ಬಸವಣ್ಣನವರ ಆದರ್ಶಗಳಿಗೆ ಮಾರು ಹೋಗಿ ಅವರ ಪ್ರತಿಮೆ ನಿರ್ಮಾಣ ಮಾಡಿದ್ದರು. ಇದು ಅವರ ಜಾತ್ಯಾತೀತ ಸಿದ್ಧಾಂತಕ್ಕೆ ಸಾಕ್ಷಿ ಎಂದರು. ಕೃಷಿ ಕ್ಷೇತ್ರದ ಸಾಧಕರು, ಸಮಾಜದ ವಿವಿಧ ಗಣ್ಯರು, ಚುನಾಯಿತ ಪ್ರತಿನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಆನಂದ್, ಶಿವಮೊಗ್ಗ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಸಂಘದ ಪೋಷಕರಾದ ಶಾರದಾ ಆಪ್ಪಾಜಿ, ಕೆಳದಿ ಶಿವಪ್ಪನಾಯಕ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಎಚ್.ಎಸ್.ಶಶಾಂಕ್, ಎಲ್.ಜಿ.ನಾಗರಾಜ್ ಉಪಸ್ಥಿತರಿದ್ದರು.
ಭದ್ರಾವತಿ ಸಂಘಕ್ಕೆ ಕೀರ್ತಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕೆಂದು ಭದ್ರಾವತಿ ಒಕ್ಕಲಿಗರ ಸಂಘ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರದಿಂದ ಆಚರಿಸಲಾಗುತ್ತಿದೆ. ಇದರ ಕೀರ್ತಿ ಭದ್ರಾವತಿ ಒಕ್ಕಲಿಗರ ಸಂಘಕ್ಕೆ ಸಲ್ಲಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.