ಜಿಲ್ಲೆ

ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ

ದಾವಣಗೆರೆ : ವಿದ್ಯಾರ್ಥಿಗಳು, ಯುವಜನರನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೊಸ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ನಾಳೆ (ಫೆ. 23) ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಹಾಗೂ ವಿವಿಧ ರಾಜ್ಯಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಧರ್ಮಗಳ ನಡುವೆ ವೈಷಮ್ಯ ಬೆಳೆಸುವ ಪ್ರಯತ್ನಗಳೂ ಆಗುತ್ತಿವೆ. ಇದು ದೊಡ್ಡ ಷಡ್ಯಂತ್ರದ ಭಾಗವಾಗಿದೆ. ಇದರ ಹಿಂದಿರುವ ಶಕ್ತಿಗಳನ್ನು ನಿಗ್ರಹಿಸಲು ತೀರ್ಮಾನಿಸಿದ್ದೇವೆ. ನಾಳೆಯ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಈ ವಿಚಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಬೆಳವಣಿಗೆಗಳ ಹಿಂದೆ ಕೆಲವು ವ್ಯಕ್ತಿ, ಸಂಘಟನೆಗಳಿವೆ. ಅವರಿಗೆ ಎಲ್ಲ ರೀತಿಯಲ್ಲಿ ಸಹಕರಿಸುವವರೂ ರಾಜ್ಯದ ಒಳಗೆ ಮತ್ತು ಹೊರಗೆ ಇದ್ದಾರೆ. ಕಾನೂನು ನೆರವು ಕೊಡುವ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಯುವತಿ ಅಮೂಲ್ಯಾ ವೀಡಿಯೊದಲ್ಲಿ ನೀಡಿರುವ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದರ ಹಿಂದಿರುವ ಸಂಘಟನೆ, ವ್ಯಕ್ತಿ, ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.

ಶಾಂತಿ ಕಾಪಾಡಲು ಈಗಿರುವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು, ರಾಜ್ಯದಲ್ಲಿ ನಡೆಯುತ್ತಿರುವ ಹೊಸ ವಿದ್ಯಮಾನಗಳಿಗೆ ತಕ್ಕಂತೆ ನಮ್ಮ ತನಿಖೆ ಹೇಗಿರಬೇಕು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ತೀರ್ಮಾನವನ್ನು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಆಯೋಜಿಸಿ ವೇದಿಕೆಯನ್ನು ಕಲ್ಪಿಸಿದವರು, ಘಟನೆಯ ಪೂರ್ವದಲ್ಲಿ ಹಾಗೂ ನಂತರ ಅವರ ಜತೆಗೆ ಬೆಂಬಲವಾಗಿ ನಿಲ್ಲುವವರು ಯಾರು ಎಂಬುದನ್ನು ಗಮನಿಸಿದ್ದೇವೆ, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದರು.

ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಿಎಎ ವಿರೋಧಿ ರ‌್ಯಾಲಿಯಲ್ಲಿ ಕೇಳಿಬಂದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಅಲ್ಲಿನ ಪೊಲೀಸ್ ಆಯುಕ್ತರ ಜತೆಗೆ ಮಾತನಾಡಿದ್ದೇನೆ. ಅಲ್ಲಿನ ವಕೀಲರೊಬ್ಬರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಆ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶಾಸಕರ ಭವನಕ್ಕೆ ಮಾಧ್ಯಮದವರ ಪ್ರವೇಶ ನಿಷೇಧಿಸಿದ ಕುರಿತು ಕೇಳಿದ ಪ್ರಶ್ನೆಗೆ, ಅದು ಸ್ಪೀಕರ್ ವ್ಯಾಪ್ತಿಗೆ ಒಳಪಟ್ಟಿದೆ, ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.