ಜಿಲ್ಲೆ

ಬೆಂಗಳೂರಿನಲ್ಲಿ ಬರಿಹೊಟ್ಟೆ ಸತ್ಯಾಗ್ರಹ 14 ರಂದು

Davangere - Prakash Arali

ದಾವಣಗೆರೆ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಆ.14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ ಸಮತಳ ತಿಳಿಸಿದರು.
ದಶಕಗಳಿಂದಲೂ ಬಗರ್ ಹುಕುಂ ಸಾಗುವಳಿದಾರರು ಭೂಮಿಯ ಹಕ್ಕುಪತ್ರಕ್ಕಾಗಿ ಧ್ವನಿ ಎತ್ತುತ್ತಿದ್ದರೂ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಆಡಳಿತಕ್ಕೆ ಬಂದ ನಂತರ ಎಲ್ಲ ಸರ್ಕಾರಗಳು ನಿರ್ಲಕ್ಷೃ ವಹಿಸಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಸುಮಾರು 40 ಲಕ್ಷ ಜನ ಬಗರ್ ಹುಕುಂ ಭೂ ಸಾಗುವಳಿದಾರರು ಹಾಗೂ 50 ಲಕ್ಷ ಜನ ವಸತಿ ರಹಿತರಿದ್ದಾರೆ. ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಆದಿವಾಸಿ ಬುಡಕಟ್ಟು ಜನರು ಹಾಗೂ ಪಾರಂಪರಿಕ ಅರಣ್ಯ ಹಕ್ಕುದಾರರಿಗೆ ಭೂಮಿಯ ಹಕ್ಕುಪತ್ರ ಮತ್ತು ಮನೆಗಳಿಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಸ್ಲಂ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ನೀಡಲು ಒತ್ತಾಯಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ಕೂಡಲೇ ಹಕ್ಕುಪತ್ರ ನೀಡುವ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಹೋರಾಟದ ಪ್ರತಿನಿಧಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಭೆ ಕರೆಯಬೇಕು. ಭೂಮಿ, ಮನೆ ಮತ್ತು ನಿವೇಶನಗಳ ಮಂಜೂರಾತಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲು ಹೈ ಪವರ್‌ಕಮಿಟಿ ರಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಭೂ ಮಂಜೂರಾತಿ ಸಮಿತಿ ರಚಿಸಬೇಕು. ಭೂ ಮಂಜೂರಾತಿ ಪ್ರಕ್ರಿಯೆ ಸರಳ ಹಾಗೂ ತ್ವರಿತಗೊಳಿಸಿ ತಡಮಾಡದೆ ಹಕ್ಕುಪತ್ರ ನೀಡುವ ಪದ್ಧತಿ ಜಾರಿಗೆ ತರಬೇಕು. ರೈತರು ಮತ್ತು ಹೋರಾಟಗಾರರ ಮೇಲೆ ಅರಣ್ಯ ಇಲಾಖೆ, ಪೊಲೀಸರು ದಾಖಲಿಸಿರುವ ಕೇಸ್‌ಗಳನ್ನು ಹಿಂಪಡೆಯಬೇಕು. ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿ 5 ಎಕರೆಗಿಂತ ಕಡಿಮೆ ಸಾಗುವಳಿ, ಇಲ್ಲವೇ ಒತ್ತುವರಿ ಮಾಡಿಕೊಂಡಿರುವ ಅರ್ಜಿದಾರರನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಸತ್ಯಾಗ್ರಹದ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಆಹೋರಾತ್ರಿ ಸತ್ಯಾಗ್ರಹ ಮುಂದುವರೆಸಲಾಗುವುದು ಹಾಗೂ ಆಗಸ್ಟ್ 15 ರ ಸ್ವಾತಂತ್ರೃ ದಿನಾಚರಣೆಯಂದು ಬೆಂಗಳೂರು ನಗರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ದಾವಣಗೆರೆ ಜಿಲ್ಲೆಯಿಂದ ಸುಮಾರು 500 ಜನರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.
ಸಮಿತಿಯ ಸತೀಶ್ ಅರವಿಂದ್, ಜಯಣ್ಣ, ಹನುಮಂತಪ್ಪ, ವೆಂಕಟೇಶ, ಪವಿತ್ರಾ ಸುದ್ದಿಗೋಷ್ಠಿಯಲ್ಲಿದ್ದರು.