ಜಿಲ್ಲೆ

ಬೆಂಗಳೂರಿಗರು ಧ್ವನಿ ಎತ್ತದಿದ್ದರೆ ನೀರು ಪೂರೈಕೆ ಸ್ಥಗಿತ : ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಕೆ

Mysuru - Desk - Naveen Kumar H P



ಮಂಡ್ಯ : ನಿದ್ರಾವಸ್ಥೆಯಲ್ಲಿರುವ ರಾಜ್ಯ ಸರ್ಕಾರ ಬಡಿದೇಳಿಸಲು ರೈತಾಪಿ ಹೋರಾಟಗಾರರು ಕೈಯಲ್ಲಿ ಚಾವಟಿ ಹಿಡಿದು ಚಳವಳಿ ಆರಂಭಿಸಿದ್ದು, ಕಾವೇರಿ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲಿಸಿ ಧ್ವನಿ ಎತ್ತದಿದ್ದರೆ ನಿಮ್ಮ ನೀರು ಪೂರೈಕೆ ನಿಲ್ಲಿಸುತ್ತೇವೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಕೆ ನೀಡಿದರು.

ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಶುಕ್ರವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಕೈಯಲ್ಲಿ ಬಾರುಕೋಲು ಹಿಡಿದು ಚಾವಟಿ ಚಳವಳಿ ನಡೆಸಿ ತಾಲೂಕು ಕಚೇರಿಯ ಎದುರು ಪ್ರತಿಭಟನಾ ಧರಣಿ ಕುಳಿತು ಬಳಿಕ ಅವರು ಮಾತನಾಡಿದರು.


ಕಳೆದ 15 ದಿನಗಳಿಂದ ಕನ್ನಂಬಾಡಿ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ 5 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾವೇರಿ ಹೋರಾಟಗಾರರ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿ ಈಗ ವಕೀಲರನ್ನು ಭೇಟಿಯಾಗಲು ದೆಹಲಿಗೆ ತೆರಳಿ ನೀರು ಹಂಚಿಕೆ ವಿವಾದ ಸಂಬಂಧ ಚರ್ಚಿಸಿ ಕಾನೂನು ಸಲಹೆ ಪಡೆವ ನಾಟಕವಾಡಿದ್ದಾರೆ ಎಂದು ದೂರಿದರು.


ತಮಿಳುನಾಡು ಪಾಲಿನ 22.5 ಟಿಎಂಸಿ ನೀರಲ್ಲಿ ಈಗಾಗಲೇ 15 ಟಿಎಂಸಿ ನೀರನ್ನು ಹರಿಸಿದ ಇವರು ಜಲಾಶಯದಲ್ಲಿ ನೀರಿನ ತಗ್ಗಿಸುವ ಮುನ್ನ ಕಾವೇರಿ ಜಲಾನಯನ ಪ್ರದೇಶದ ನೀರಿನ ಕೊರತೆ, ರೈತರ ಕೃಷಿ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿನ ಲಭ್ಯತೆ ಕುರಿತು ಸೂಕ್ತ ಮಾಹಿತಿಯನ್ನು ಕಾವೇರಿ ನೀರಾವರಿ ಪ್ರಾಧಿಕಾರದ ಸಮಿತಿ, ಜಲತಜ್ಞರು ಸೇರಿದಂತೆ ನ್ಯಾಯಾಲಯಕ್ಕೆ ವಕೀಲರ ಮೂಲಕ ವರದಿ ನೀಡಲು ಪ್ರಯತ್ನಿಸದೆ ಮೌನವಹಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರೈತರೇ ನ್ಯಾಯಾಲಯಕ್ಕೆ ಹೋಗಲಿ ಎಂದು ಉತ್ತರ ನೀಡಿ ರೈತರ ಹೋರಾಟದಿಂದ ಸಂಕಷ್ಟ ಎದುರಾದ ಮೇಲೆ ಈಗ ಅವರೇ ಹೋಗಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.


ಸಂಕಷ್ಟ ಸ್ಥಿತಿಯಲ್ಲಿ ಅತ್ಯಂತ ಜವಾಬ್ದಾರಿಯುತ ನೀರಾವರಿ ಖಾತೆ ನಿಭಾಯಿಸುವ ಅರ್ಹತೆ ಹಾಗೂ ಯೋಗ್ಯತೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನೀರಾವರಿ ಖಾತೆ ಸ್ಥಾನದಿಂದ ಡಿಕೆಶಿ ಅವರಿಂದ ತೆರವುಗೊಳಿಸಬೇಕು. ಈ ಮೂಲಕ ಕಾವೇರಿ ಹೋರಾಟಗಾರರು ಹಾಗೂ ರೈತಾಪಿ ಜನರಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು. ಈಗಲೂ ಹರಿಯುತ್ತಿರುವ ನೀರನ್ನು ಸ್ಥಗಿತಗೊಳಿಸದಿದ್ದರೆ ಭಾನುವಾರ ತೀವ್ರ ಹೋರಾಟಕ್ಕೆ ಮುಂದಾಗುವ ಸಂದೇಶ ರವಾನಿಸಿದರು.


ನೀರು ಕೊಡುವುದಿಲ್ಲ ಎಚ್ಚರ :
ಕಾವೇರಿ ನೀರಿಲ್ಲದೆ ರೈತರು ಹಾಗೂ ಈ ಭಾಗದ ರೈತಾಪಿ ಹೋರಾಟಗಾರರು ನಿತ್ಯ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ ಕಾವೇರಿ ಕಣಿವೆ ಜನರಿಗಿಂತ ದುಪ್ಪಟ್ಟು ನೀರು ಬಳಸುವ ಬೆಂಗಳೂರಿಗರು, ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಸುಮ್ಮನಿದ್ದಾರೆ. ಕಾವೇರಿ ನೀರು ಅವಲಂಬಿತ ಯಾರೇ ಆದರೂ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿ ರೈತರ ಹೋರಾಟ ಗೌರವಿಸಿ ಬೆಂಬಲಿಸದಿದ್ದರೆ, ಜಿಲ್ಲೆಯ ತೊರೆಕಾಡನಹಳ್ಳಿಯಿಂದ ಪೂರೈಕೆಯಾಗುತ್ತಿರುವ ಕಾವೇರಿ ನೀರನ್ನು ತಡೆಯುವ ಹಾಗೂ ಜಲಾಶಯದಲ್ಲೇ ನೀರು ಉಳಿಸುವ ಕಾರ್ಯಕ್ರಮಕ್ಕೆ ಶೀಘ್ರವೇ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಾಕೀತು ಮಾಡಿದರು.


ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಸಂಚಾಲಕರಾದ ಡಿ.ಮಂಜುನಾಥ್, ಧನಂಜಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜು, ಮಹಾಲಿಂಗು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಹೋಬಳಿ ಸಂಚಾಲಕ ಪಾಲಹಳ್ಳಿ ರಾಮಚಂದ್ರು, ಪದಾಧಿಕಾರಿಗಳಾದ ರವಿಲಕ್ಷ್ಮಣ, ಚಾಮರಾಜು, ಸಿದ್ದೇಗೌಡ, ರಾಮಚಂದ್ರು, ರಮೇಶ್, ಕಿರಂಗೂರು ಪುಟ್ಟಣ, ಬಲ್ಲೇನಹಳ್ಳಿ ಮಹೇಶ್, ಬೆಳಗೊಳ ಸುನೀಲ್ ಇತರರು ಈ ವೇಳೆ ಭಾಗಿಯಾಗಿದ್ದರು.