ಗದಗ: ಬೆಂಗಳೂರು ಸೇರಿ ವಿವಿಧೆಡೆಯಿಂದ ನಗರಕ್ಕೆ ಆಗಮಿಸಿದ ಗರ್ಭಿಣಿ ಸೇರಿ ಹಲವಾರು ಕಾರ್ವಿುಕರು ಸ್ವಗ್ರಾಮಕ್ಕೆ ತೆರಳಲು ಬಸ್ ಇಲ್ಲದೇ ಸೋಮವಾರ ಪರದಾಡಿದರು. ಬೆಂಗಳೂರಿನಿಂದ ನಸುಕಿನ ನಾಲ್ಕು ಗಂಟೆಗೆ ಗದಗ ಕೇಂದ್ರ ಬಸ್ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ನೂರಾರು ಕಾರ್ವಿುಕರನ್ನು ತಂದು ಬಿಡಲಾಯಿತು. ನಗರಕ್ಕೆ ಬಂದ ಎಲ್ಲರನ್ನೂ ಬಸ್ ನಿಲ್ದಾಣದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದರು.
ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮಕ್ಕೆ ಹೋಗಲು ಬಸ್ ಇಲ್ಲದೆ ಗರ್ಭಿಣಿ ಅನುಷಾ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಪರದಾಡಿದರು. ಕಂಕುಳಲ್ಲಿ ಮಗುವನ್ನು ಇಟ್ಟುಕೊಂಡು ನೀರು, ಉಪಾಹಾರಕ್ಕಾಗಿ ಹುಡುಕುವಂತಾಗಿತ್ತು.
ಬೆಂಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳಿಂದ ಆಗಮಿಸಿದ ಕಾರ್ವಿುಕರು ತಮ್ಮ ತವರು ಗ್ರಾಮಗಳಿಗೆ ತೆರಳಲು ಬಸ್ ಇಲ್ಲದೆ ಪರದಾಡಿದರು. ವೃದ್ಧರು, ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಊರುಗಳಿಗೆ ತೆರಳಲು ಹರಸಾಹಸ ಪಟ್ಟರು. ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿತ್ತು. ಆಟೋಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬೇಕೆಂದರೆ ಆಟೋ ಚಾಲಕರು 500-1000 ರೂ. ಕೇಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಕಾರ್ವಿುಕರು ಆರೋಪಿಸಿದರು. ಆದರೆ, ಕಾರ್ವಿುಕರ ಬಳಿ ಹಣವಿಲ್ಲದೆ, ಊರಿಗೆ ಹೋಗಲು ವ್ಯವಸ್ಥೆ ಇಲ್ಲದೇ ಫಜೀತಿ ಅನುಭವಿಸಿದರು.
ಜಿಲ್ಲಾಡಳಿತ ನಮ್ಮನ್ನು ನಮ್ಮ ಗ್ರಾಮಗಳಿಗೆ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ವಿಷಯ ತಿಳಿದ ತಕ್ಷಣ ಜಿಲ್ಲಾಡಳಿತ ಬಸ್ ಮತ್ತು ಖಾಸಗಿ ವಾಹನಗಳ ಮೂಲಕ ಅವರನ್ನು ಸ್ವಗ್ರಾಮಗಳಿಗೆ ಕಳಿಸಿಕೊಟ್ಟಿತು.
ರಾಜ್ಯದ ವಿವಿಧೆಡೆಯಿಂದ ಸೋಮವಾರ ನಗರಕ್ಕೆ ಆಗಮಿಸಿದ ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ ಅವರ ಕೈಗೆ ಸೀಲ್ ಹಾಕಿ ಕೈಬಿಡಲಾಯಿತು. ಜತೆಗೆ ಅವರನ್ನು ಅವರ ಸ್ವಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ನಗರಕ್ಕೆ ಬಂದಿರುವ ಕಾರ್ವಿುಕರ ನೋಂದಣಿ ಮಾಡಿಕೊಂಡಿದ್ದು ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಜನಜೀವನ ಸಹಜ: ಗದಗ-ಬೆಟಗೇರಿ ಸೇರಿ ಜಿಲ್ಲಾದ್ಯಂತ ಲಾಕ್ಡೌನ್ ಸಡಿಲಿಕೆ ಅಗಿದ್ದರಿಂದ ಸೋಮವಾರ ಜನಜೀವನ ಸಹಜವಾಗಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖಾಸಗಿ ವಾಹನಗಳು ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ. ರಸ್ತೆಗಳ ಮಧ್ಯೆ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬಹುತೇಕ ಜನರು ಮಾಸ್ಕ್ ಧರಿಸಿದ್ದರು. ಆದರೆ, ಪರಸ್ಪರ ಅಂತರ ಕಾಪಾಡಿಕೊಳ್ಳದಿರುವುದು ಕಂಡುಬಂದಿತು.
ಬಡವರಿಗೆ ದಿನಸಿ ಕಿಟ್ ವಿತರಣೆ
ಮುಂಡರಗಿ: ತಾಲೂಕಿನ ಕಕ್ಕೂರ ಗ್ರಾಮದಲ್ಲಿ ಗುತ್ತಿಗೆದಾರ ಆನಂದ ದೊಡ್ಡಮನಿ ಅವರು 280 ಬಡ ಕುಟುಂಬಗಳಿಗೆ ಹಾಗೂ ವಿರುಪಾಪೂರ ತಾಂಡಾ ಗ್ರಾಮದಲ್ಲಿ ಗುತ್ತಿಗೆದಾರ ಸೋಮನಗೌಡ ಪಾಟೀಲ ಅವರು 221 ಬಡ ಕುಟುಂಬಗಳಿಗೆ ಭಾನುವಾರ ಅಗತ್ಯ ದಿನಸಿ ಸಾಮಗ್ರಿ ಕಿಟ್ ವಿತರಿಸಿದರು. ಶಾಸಕ ರಾಮಣ್ಣ ಲಮಾಣಿ ಅವರು ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಬಿಜೆಪಿ ಮುಖಂಡರಾದ ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಎಸ್.ವಿ. ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ರಜನಿಕಾಂತ ದೇಸಾಯಿ, ಪವನ ಮೇಟಿ, ಈಶ್ವರಪ್ಪ ಮಲ್ಲಶೆಟ್ಟಿ, ರಾಮಸ್ವಾಮಿ ನಿಟ್ಟಾಲಿ, ಹಂಬವ್ವ ಕಟ್ಟಿಮನಿ, ಮಂಜಪ್ಪ ಹ್ಯಾಡ್ಲ, ಹನುಮಂತ ಹುಳ್ಳಿ, ಭೀಮಣ್ಣ ಸುಗ್ನಳ್ಳಿ, ಶಿವಾನಂದ ಪೂಜಾರ, ಧನಂಜಯ ಪೂಜಾರ, ಹನುಮಂತ ಮೇಟಿ, ನಿಂಗಪ್ಪ ದೇಸಾಯಿ, ಸೋಮು ಹಕ್ಕಂಡಿ, ಕೃಷ್ಣ ಲಿಂಗಶೆಟ್ಟರ್ ಇತರರು ಇದ್ದರು.
ಜಿಲ್ಲೆಯಲ್ಲಿ ಇನ್ನೆರಡು ವಾರ ಬಸ್ ಸಂಚಾರವಿಲ್ಲ
ಗದಗ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 4 ರಿಂದ ಎರಡು ವಾರದವರೆಗೆ ನಿಷೇಧಾಜ್ಞೆ ಅವಧಿಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಗದಗ ಜಿಲ್ಲೆಯನ್ನು ಕಿತ್ತಳೆ ವಲಯವಾಗಿ ವರ್ಗೀಕರಿಸಲಾಗಿದೆ. ಜಿಲ್ಲೆಯ ಒಳಗೆ ಮತ್ತು ಅಂತರ್ ಜಿಲ್ಲೆ ಬಸ್ ಸಂಚಾರ ನಿರ್ಬಂಧಿಸಿದೆ. ಅಂತರ್ ಜಿಲ್ಲೆ ಹಾಗೂ ಜಿಲ್ಲಾ ವ್ಯಾಪ್ತಿ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ನಿರ್ಬಂಧಿತ ಚಟುವಟಿಕೆಗಳು: ಜಿಲ್ಲೆಯಾದ್ಯಂತ ಮೆರವಣಿಗೆ ಸಭೆ, ಸಮಾರಂಭ, ಸಂತೆ, ಜಾತ್ರೆ, ಸಮ್ಮೇಳನ, ಸಮಾವೇಶ, ಯಾವುದೇ ಧಾರ್ವಿುಕ ಉತ್ಸವ, ಉರುಸು, ಕ್ರೀಡಾಕೂಟ, ಬೇಸಿಗೆ ಶಿಬಿರ, ಪ್ರವಾಸ ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ವಿುಕ, ಹಾಗೂ ಜನಸೇರುವ ಎಲ್ಲ ಸಮಾವೇಶ ನಡೆಸುವಂತಿಲ್ಲ. ರೆಸ್ಟೋರೆಂಟ್ ಬಾರ್, ಎಲ್ಲ ಶಾಲಾ ಕಾಲೇಜು ಶಿಕ್ಷಣ ತರಬೇತಿ, ಎಲ್ಲ ಕೋಚಿಂಗ್ ಕ್ಲಾಸ್ ಹಾಗೂ ಸ್ಟಡಿ ಸೆಂಟರ್ಗಳನ್ನು ನಿಷೇಧಿಸಲಾಗಿದೆ. ಆನ್ಲೈನ್ ಕ್ಲಾಸ್ ಹಾಗೂ ದೂರ ಶಿಕ್ಷಣ ಕಲಿಕೆಗೆ ನಿಷೇಧ ಅನ್ವಯವಾಗುವುದಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಹಾಗೂ 5 ಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಸಾರ್ವಜನಿಕರು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.