ಜಿಲ್ಲೆ

ಬೆಂಗಳೂರಲ್ಲಿ ಜ.3ಕ್ಕೆ ಅಲೆಮಾರಿಗಳ ಕಲೋತ್ಸವ

ದಾವಣಗೆರೆ:ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜ.3ರಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೋತ್ಸವ ನಡೆಯಲಿದೆ ಎಂದು ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದರು.

ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ 1ರ ಜನಾಂಗಗಳ ಒಕ್ಕೂಟದಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಲಾಂಛನ ಬಿಡುಗಡೆಗೊಳಿಸುವರು. ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ . ಇಂಧನ ಸಚಿವ ವಿ. ಸುನಿಲ್‌ಕುಮಾರ್, ಒಕ್ಕೂಟದ ಅಧ್ಯಕ್ಷ ತುಕಾರಾಂ ನಾಗಪ್ಪ ಭಾಗವಹಿಸುವರು.

ಪ್ರವರ್ಗ-1ರ ವ್ಯಾಪ್ತಿಯ 46 ಜನಾಂಗದ ಅಲೆಮಾರಿ- ಅರೆ ಅಲೆಮಾರಿ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕಲಾ ಪ್ರತಿಭಾ ಪ್ರದರ್ಶನ ಮಾಡುವ ಜತೆಗೆ ಸಮಾಜಕ್ಕೆ ಅಗತ್ಯವಿರುವ ಮೀಸಲಿಗೆ ಒತ್ತಡ ತರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಲೆಮಾರಿ ಜನಾಂಗದ ಕಲಾವಿದರಿಗೆ ಕಲಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ವಿಚಾರ ಸಂಕಿರಣ, ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಮಂಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷೆ ಎಸ್.ಆರ್.ಇಂದಿರಮ್ಮ, ಗೋಪಾಲ ಗೋಂಧಳಿ, ಚೌಡೋಜಿರಾವ್ ಗೋಂಧಳಿ, ಡಿ.ನಾಗರಾಜ್, ಎಚ್.ಆರ್.ಹಾಲಸ್ವಾಮಿ ಇತರರಿದ್ದರು.