ಸುಂಟಿಕೊಪ್ಪ: ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆಟೋ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಆಟೋ ಚಾಲಕ ಶಿವರಾಜ್ ಎಂಬಾತನಿಗೆ ಸೇರಿದ ಆಟೋರಿಕ್ಷಾ ಇದಾಗಿದೆ. ಸುಂಟಿಕೊಪ್ಪದಿಂದ ಮಂಗಳವಾರ ರಾತ್ರಿ 9 ಗಂಟೆಗೆ ಅಂದಗೋವೆಯಲ್ಲಿರುವ ಮನೆಗೆ ತೆರಳುತ್ತಿರುವಾಗ ಮಾರ್ಗಮಧ್ಯದ ತಿಲಕ ಎಸ್ಟೇಟ್ ಬಳಿ ಚಾಲಕ ಸೀಟಿನ ಹಿಂಬದಿಯಲ್ಲಿ ಬಿಸಿಯಾಗಲಾರಂಭಿಸಿದೆ. ಕೂಡಲೇ ಆಟೋವನ್ನು ನಿಲ್ಲಿಸಿ ಕೆಳಗಿಳಿದು ನೋಡಿದಾಗ ಇಂಜಿನ್‌ನ ಸೆನ್ಸಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜ್ವಾಲೆಯ ಪ್ರಮಾಣ ಅಧಿಕಗೊಂಡಿದ್ದು, ಕೂಡಲೇ ಚಾಲಕ ಆಟೋವನ್ನು ಬಿಟ್ಟು ಓಡಿದ್ದಾರೆ. ಅಗ್ನಿಯ ಜ್ವಾಲೆಗೆ ಸಿಲುಕಿದ ಆಟೋರಿಕ್ಷಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.