ಶ್ರೀರಂಗಪಟ್ಟಣ: ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಭಸ್ಮವಾಗಿದೆ.
ಕಾರು ರಾಜಸ್ಥಾನ ಮೂಲದ ವಿಕ್ರಂ ಸಿಂಗ್ ಎಂಬುವರಿಗೆ ಸೇರಿದೆ. ಕಾರಿನ ಮಾಲೀಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ಬೆಳಗ್ಗೆ 11.30ರಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಕಾರಿನ ಒಳಭಾಗದಲ್ಲಿ ಹೊಗೆ ಆವರಿಸುತ್ತಿದ್ದಂತೆ ಚಾಲಕ ಕಾರನ್ನು ಹೆದ್ದಾರಿ ಬದಿ ನಿಲ್ಲಿಸಿದ್ದು, ಎಲ್ಲರೂ ಹೊರಬಂದಿದ್ದಾರೆ.
ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.