ಬೇಲೂರು: ತಾಲೂಕಿನ ಮಲಸಾವರ ಗ್ರಾಮದದಲ್ಲಿ ಶನಿವಾರ ಬೆಂಕಿ ಬಿದ್ದು, ಗುಡಿಸಲಿನೊಂದಿಗೆ ನಗದು, ಚಿನ್ನದ ಒಡವೆ, ಬಟ್ಟೆ, ದಿನಸಿ ಪದಾರ್ಥ ಹಾಗೂ ನಾಯಿಮರಿ ಸಂಪೂರ್ಣ ಸುಟ್ಟು ಕರಕಲಾಗಿವೆ.
ಮಲಸಾವರ ಗ್ರಾಮದ ನೇತ್ರವತಿ ಹಾಗೂ ಮಂಜುನಾಥ್ ಬಡ ಕೂಲಿ ಕಾರ್ಮಿಕರ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಇಬ್ಬರೂ ಎಂದಿನಂತೆ ನಾಯಿಮರಿಯನ್ನು ಮನೆಯಲ್ಲಿ ಕಟ್ಟಿಹಾಕಿ, ಮಗುವಿನೊಂದಿಗೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.
ಸ್ವಂತ ಮನೆಕ್ಕಾಗಿ ಗ್ರಾಮ ಪಂಚಾಯಿತಿ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಹೀಗಾಗಿ ಮನೆ ನಿರ್ಮಿಸಿಕೊಳ್ಳಲು ಇಬ್ಬರೂ ದುಡಿದ ಹಣವನ್ನು ಕೂಡಿಡುತ್ತಿದ್ದೆವು. ಆದರೆ ಮನೆಗೆ ಬೆಂಕಿ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಮುಂದೆ ಏನು ಮಾಡುಬೇಕು ಎಂಬುದು ತೋಚುತ್ತಿಲ್ಲ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.