ಜಿಲ್ಲೆ

ಬೃಹತ್ ಕೈಗಾರಿಕೆ ಸ್ಥಾಪನೆಗೆ ಸರ್ಕಾರವೇ ಅಡ್ಡಿ

ಹುಬ್ಬಳ್ಳಿ: ರಾಜಧಾನಿ ಬೆಂಗಳೂರಿನಿಂದ ಹೊರಗೆ ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪದೇ ಪದೆ ಹೇಳುತ್ತ ಬಂದಿದೆ. ಆದರೆ, ವಾಸ್ತವದಲ್ಲಿ ಸರ್ಕಾರ ಹೇಳಿದಂತೆ ನಡೆದುಕೊಂಡಿಲ್ಲ. ಧಾರವಾಡ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರವೇ ಅಡ್ಡಿಯಾಗಿದೆ ಎಂಬುದು ಅಷ್ಟೇ ಸತ್ಯ.

ಹೆಲ್ತ್ ಸಿಟಿ ಪ್ರಾಜೆಕ್ಟ್, ಹೀರೊ ಮೋಟೊಕಾರ್ಪ್ ಹಾಗೂ ಕಲ್ಯಾಣಿ ಗ್ರುಪ್​ನ ಭಾರತ ಫೋರ್ಜ್ ಲಿಮಿಟೆಡ್​ನ ಘಟಕಗಳು ಕೈ ತಪ್ಪಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಸರ್ಕಾರದ ವಿಳಂಬ ನೀತಿ, ಸ್ಥಳೀಯ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದ್ದು, ಜಿಲ್ಲೆ ದೊಡ್ಡ ನಷ್ಟ ಅನುಭವಿಸಿದೆ.

ಸಾವಿರಾರು ಉದ್ಯೋಗಾವಕಾಶ ಸೃಷ್ಟಿಸುವ ಬೃಹತ್ ಕಂಪನಿಗಳು ಆಸಕ್ತಿ ತೋರಿಸಿದಾಗ ಅವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದು ಜಾಣತನ. ಜಿಲ್ಲೆಗೆ ತಪ್ಪಿದ ಅವಕಾಶವನ್ನು ಬೇರೆ ರಾಜ್ಯ, ಜಿಲ್ಲೆಗಳು ಜಾಣತನ ಪ್ರದರ್ಶಿಸಿ ಬಳಸಿಕೊಂಡಿವೆ. ಹೀರೊ ಮೋಟೊಕಾರ್ಪ್ ಘಟಕ ಆಂಧ್ರಪ್ರದೇಶದ ಚಿತ್ತೂರು ಪಾಲಾಯಿತು. ಹೆಲ್ತ್ ಸಿಟಿ ಪ್ರಾಜೆಕ್ಟ್ ದೇವನಹಳ್ಳಿಗೆ ಶಿಫ್ಟ್ ಆಯಿತು. ಭಾರತ ಫೋರ್ಜ್ ಘಟಕವೂ ಕೈ ತಪ್ಪುವ ಹಂತದಲ್ಲಿದೆ.

2010ರಲ್ಲಿ ಹೀರೊ ಮೋಟೊಕಾರ್ಪ್ ಕಂಪನಿ ದಕ್ಷಿಣ ಭಾರತದಲ್ಲಿ ತನ್ನ ಪ್ರಪ್ರಥಮ ಉತ್ಪಾದನಾ ಘಟಕ ಸ್ಥಾಪನೆಗೆ ಉದ್ದೇಶಿಸಿತ್ತು. ಈ ಸಂಬಂಧ ಹು-ಧಾ ವನ್ನು ಆಯ್ಕೆ ಮಾಡಿಕೊಂಡಿತ್ತು. ಈ ಕುರಿತು ಕಂಪನಿ ಕಳುಹಿಸಿದ್ದ ಪ್ರಸ್ತಾವನೆಗೆ ಉತ್ತರ ಕೊಡಲು ಕರ್ನಾಟಕ ಸರ್ಕಾರ 12-13 ತಿಂಗಳು ತೆಗೆದುಕೊಂಡಿತ್ತು. ತದನಂತರ ಪ್ರತಿ ಹಂತದಲ್ಲೂ ವಿಳಂಬವಾದ ಪರಿಣಾಮ 2014ರಲ್ಲಿ ಕಂಪನಿ ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿತು. ಕಂಪನಿ ಕೇಳಿದ ಎಲ್ಲ ವಿನಾಯಿತಿ ಜತೆಗೆ ಆಂಧ್ರ ಪ್ರದೇಶ ಸರ್ಕಾರ ಉಚಿತವಾಗಿ ಭೂಮಿ ಸಹ ನೀಡಿತ್ತು. 1600 ಕೋಟಿ ರೂ. ಹೂಡಿಕೆ ಹಾಗೂ ಸಾವಿರ ಜನರಿಗೆ ಉದ್ಯೋಗ ಕೊಡುವ ಕೈಗಾರಿಕೆ ಇದಾಗಿತ್ತು.

‘ಉಚಿತ ಭೂಮಿ ನೀಡಲು ನಮ್ಮಿಂದ ಸಾಧ್ಯವಿಲ್ಲ. ಮುಂದೆ ಕೈಗಾರಿಕೆಗಳ ಸ್ಥಾಪನೆಗೆ ಎಲ್ಲರೂ ಉಚಿತ ಭೂಮಿ ಕೇಳುವ ಟ್ರೆಂಡ್ ನಿರ್ವಣವಾಗುತ್ತದೆ’ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಹೀರೊ ಮೋಟೊಕಾರ್ಪ್ ಕೈ ತಪ್ಪಲು ಉಚಿತವಾಗಿ ಭೂಮಿ ಕೊಟ್ಟಿಲ್ಲ ಎಂಬುದೊಂದೇ ಕಾರಣವಲ್ಲ. ಸ್ಥಳೀಯ ರಾಜಕಾರಣಿಗಳು ಕಂಪನಿಯಲ್ಲಿ ಪಾಲುದಾರಿಕೆ ಹಾಗೂ ಪ್ರಾತಿನಿಧ್ಯವನ್ನು ಕೇಳಿದ್ದರು. ಇದು ಕಂಪನಿಗೆ ಸುತಾರಾಂ ಒಪ್ಪಿಗೆ ಇರಲಿಲ್ಲ.

ಭಾರತ ಫೋರ್ಜ್: ಮುಮ್ಮಿಗಟ್ಟಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪುಣೆ ಮೂಲದ ಭಾರತ ಫೋರ್ಜ್ ಲಿ. ಕಂಪನಿ 150 ಕೋಟಿ ರೂ. ಬಂಡವಾಳ ಹೂಡಿಕೆಯಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ 2018ರಲ್ಲಿ ಮುಂದೆ ಬಂದಿತ್ತು. 60 ಎಕರೆ ಭೂಮಿ ಕೇಳಿತ್ತು. ಭೂಮಿ ಹಂಚಿಕೆ ವಿಷಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಟ್ಟದಲ್ಲೇ ತಳಕು ಹಾಕಿಕೊಂಡಿತು. ಬಳಿಕ ಕಂಪನಿ ಆಸಕ್ತಿ ತೋರಿಸುತ್ತಿಲ್ಲ. ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಈಗ ತಮ್ಮ ಆಡಳಿತ ಯಂತ್ರ ಚುರುಕುಗೊಳಿಸಬೇಕಿದೆ. ಅಧಿಕಾರಿಗಳ ‘ಕೆಂಪುಪಟ್ಟಿ’, ಅಧಿಕಾರಸ್ಥರ ‘ಒಳಒಪ್ಪಂದ’ ತೊಡೆದು ಹಾಕಬೇಕಿದೆ.

ಹೆಲ್ತ್ ಸಿಟಿ ಪ್ರಾಜೆಕ್ಟ್: 2017ರಲ್ಲಿ ಹೆಲ್ತ್ ಸಿಟಿ ಪ್ರಾಜೆಕ್ಟ್​ಗೆ ಧಾರವಾಡ ಬಳಿಯ ಬೇಲೂರಿನಲ್ಲಿ 341 ಎಕರೆ, ಕೋಟೂರಿನಲ್ಲಿ 253 ಎಕರೆ ಭೂಮಿ ತೋರಿಸಲಾಗಿತ್ತು. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಸಭೆಗಳನ್ನು ನಡೆಸಿದಾಗ ಅಂದಿನ ಸಮ್ಮಿಶ್ರ ಸರ್ಕಾರ ಪ್ರತಿನಿಧಿಗಳನ್ನು ಕಳುಹಿಸಿರಲಿಲ್ಲ. ದೇವನಹಳ್ಳಿಗೆ ಸ್ಥಳಾಂತರಿಸಿದರೂ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತೇ ಆಗಿರಲಿಲ್ಲ. ಈ ಯೋಜನೆಯಿಂದ ಅಂದಾಜು 10 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತಿತ್ತು. ಇಂಗ್ಲೆಂಡ್​ನ ಯುಕೆ ಗ್ಲೋಬಲ್ ಹೆಲ್ತ್ ಕೇರ್ ಕಂಪನಿ ಆಸ್ತಿತ್ವಕ್ಕೆ ತಂದಿರುವ ಇಂಡೋ-ಯುಕೆ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಗ್ರುಪ್ ಭಾರತದಲ್ಲಿ ನಿರ್ವಿುಸಲಿರುವ 11 ಹೆಲ್ತ್ ಸಿಟಿಗಳಲ್ಲಿ ಇದು ಒಂದಾಗಿತ್ತು. ವಿಶಾಲವಾದ ಸ್ಥಳದಲ್ಲಿ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಾವಿರ ಹಾಸಿಗೆ ಸಾಮರ್ಥ್ಯದ ಬೃಹತ್ ಆಸ್ಪತ್ರೆ, ವೈದ್ಯರು-ನರ್ಸ್​ಗಳ ತರಬೇತಿ ಕೇಂದ್ರ, ಸಂಶೋಧನಾ ಕೇಂದ್ರ, ಕೆಲ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ ಸೇರಿ ಹೆಲ್ತ್ ಸಿಟಿ ನಿರ್ವಣವಾಗಬೇಕಿತ್ತು.

ಭಾರತ ಫೋರ್ಜ್ ಲಿಮಿಟೆಡ್​ಗೆ ಮುಮ್ಮಿಗಟ್ಟಿಯಲ್ಲಿ 60 ಎಕರೆ ಜಮೀನನ್ನು ಪ್ರತಿ ಎಕರೆಗೆ 95 ಲಕ್ಷ ರೂ. ನಂತೆ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಬಳಿಕ ಕಂಪನಿಯ ಕೋರಿಕೆ ಮೇರೆಗೆ 2 ಬಾರಿ ಜಮೀನಿನ ದರ ಇಳಿಕೆ ಮಾಡಲಾಗಿತ್ತು. ಅದಕ್ಕೂ ಕಂಪನಿ ಆಸಕ್ತಿ ತೋರಿಸಲಿಲ್ಲ. | ಮೋಹನ ಭರಮಕ್ಕನವರ, ಜಂಟಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ

ಹೂಡಿಕೆ ಸ್ನೇಹಿ ಉತ್ತರ ಕರ್ನಾಟಕ: ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರರು ಬರಲು ಹಾಗೂ ಘಟಕ ಸ್ಥಾಪಿಸಲು ಈಗ ಯಾವುದೇ ಆತಂಕ ಇಲ್ಲವೇ ಇಲ್ಲ. ದೊಡ್ಡ ಉದ್ಯಮಿಗಳು ಹೂಡಿಕೆ ಮಾಡದೇ ಇರುವುದಕ್ಕೆ ಕಾರಣಗಳೂ ಇಲ್ಲ.

ಮೊದಲೆಲ್ಲ ಕನೆಕ್ಟಿವಿಟಿ ಇಲ್ಲ, ಲ್ಯಾಂಡ್ ಇಲ್ಲ, ನೀರಿಲ್ಲ ಎಂಬೆಲ್ಲ ನೆಪ ಹೇಳುತ್ತಿದ್ದವರಿಗೆ ಸಮರ್ಪಕ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರ ಹಲವು ರಿಯಾಯಿತಿಗಳನ್ನು ಕೊಡಲು ಮುಂದಾಗಿರುವುದರಿಂದ ದಶಕದ ಹಿಂದಿನ ವಾತಾವರಣ ಈಗ ಇಲ್ಲವಾಗಿದೆ.

ವಿಶೇಷವೆಂದರೆ ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಆಗಿ ಅಭಿವೃದ್ಧಿಯಾಗುವುದರಿಂದ ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿ ತ್ರಿವಳಿ ನಗರ ವೇಗವಾಗಿ ಬೆಳೆಯುವುದಕ್ಕೆ ಎಲ್ಲ ಅವಕಾಶಗಳು ಈಗ ಸೃಷ್ಟಿಯಾಗಿವೆ.

ಹುಬ್ಬಳ್ಳಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿದ್ದು, ನಿತ್ಯ ಅಂದಾಜು 30 ವಿಮಾನಗಳು ಬಂದು ಹೋಗುತ್ತಿವೆ. ರಸ್ತೆ ಸಂಪರ್ಕ, ರೈಲು ಸಂಪರ್ಕ ಸುಧಾರಣೆಯಾಗಿದೆ. ಸಮೀಪದ ಬೇಲೆಕೇರಿ ಬಂದರು ಅಭಿವೃದ್ಧಿಗೆ ಕಾಲ ಸನ್ನಿಹಿತವಾಗಿದೆ.

ನಾಲ್ಕಾರು ಸಾವಿರ ಎಕರೆ ಭೂಮಿ ಸ್ವಾಧೀನವಾಗಿದೆ. ಉದ್ಯಮಿಗಳು ಕೇಳಿದಷ್ಟು ಜಮೀನು ಕೊಡಲು ಸರ್ಕಾರ ಸಿದ್ಧವಾಗಿದೆ. ನೀರು ಸೇರಿ ಮೂಲ ಸೌಲಭ್ಯಗಳಿಗೂ ಕೊರತೆ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ದೇಶ- ವಿದೇಶದ ಉದ್ಯಮಿಗಳಿಗೆ ವಿಶ್ವಾಸ ಇಮ್ಮಡಿಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ವೇದಿಕೆ ಜಂಟಿ ಕಾರ್ಯದರ್ಶಿಯೂ ಆಗಿರುವ ಎನ್.ಎಸ್. ಇನ್ಪೋಟೆಕ್ ಮಾಲೀಕ ಸಂತೋಷ ಹುರುಳಿಕೊಪ್ಪಿ ಅವರು.

ಐಟಿ ಕಂಪನಿ ಬರಲಿವೆ: ಅಮೆರಿಕದಲ್ಲಿ ಐಟಿ ಉದ್ಯಮ ನಡೆಸುವುದು ವೆಚ್ಚಕರವಾಗುತ್ತಿದ್ದಂತೆ ಹೆಚ್ಚಿನ ಕಂಪನಿಗಳು ಬೆಂಗಳೂರಿಗೆ ಸ್ಥಳಾಂತರವಾದವು, ಅನೇಕ ಘಟಕಗಳು ಹೊಸದಾಗಿಯೂ ಸ್ಥಾಪನೆಯಾದವು. ಈಗ ಬೆಂಗಳೂರು ಟ್ರಾಫಿಕ್ ಕಿರಿಕಿರಿ, ಅಧಿಕ ವೆಚ್ಚದ ಜೀವನ ಕ್ರಮದಿಂದಾಗಿ ರಾಜ್ಯದ ದ್ವಿತೀಯ ಸ್ತರದ ನಗರಗಳತ್ತ ಎಲ್ಲರ ಚಿತ್ತ ಹರಿದಿದೆ. ಹಾಗಾಗಿ ಐಟಿ ಬಿಟಿಗೂ ಇಲ್ಲಿ ಹೆಚ್ಚು ಅವಕಾಶಗಳಿವೆ.

ಇದೇ ಮೊದಲ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೆಚ್ಚಿನ ಕಂಪನಿಗಳಿಗೆ ವಿಶ್ವಾಸ ಬಂದಿದ್ದು, ಹೂಡಿಕೆಗೆ ಮನಸು ಮಾಡಲಿವೆ. ಬೇರೆಬೇರೆ ಕ್ಷೇತ್ರದ ಕಂಪನಿಗಳು ಇಲ್ಲಿಗೆ ಬರಲಿವೆ. ಈ ಭಾಗದಲ್ಲಿ ಒಂದು ಆಶಾದಾಯಕ ವಾತಾವರಣ ನಿರ್ವಣವಾಗಿದೆ. ಹುಬ್ಬಳ್ಳಿ- ಧಾರವಾಡ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ಅವರು ಹೇಳುತ್ತಾರೆ.

ಶೈಕ್ಷಣಿಕ ಅಭ್ಯುದಯ: ಶೈಕ್ಷಣಿಕವಾಗಿ ನೋಡಿದರೆ ಇಲ್ಲಿ ಕಾನೂನು, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಸ್ವಾಯತ್ತ ವಿವಿಗಳು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಹಲವು ಇಂಜಿನಿಯರಿಂಗ್ ಕಾಲೇಜ್​ಗಳಿವೆ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ಕೌಶಲಯುಕ್ತ ಯುವಶಕ್ತಿ ಲಭ್ಯವಿದೆ. ವಿಶೇಷ ಎಂದರೆ ಬೆಂಗಳೂರು, ಚೆನ್ನೈಗೆ ಹೋಲಿಸಿದರೆ ಇಲ್ಲಿ ಮಾನವ ಸಂಪನ್ಮೂಲ ಅಷ್ಟೊಂದು ದುಬಾರಿಯಲ್ಲ.

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯತ್ತ ಬಂದರೆ ಯಾವುದೇ ತೊಂದರೆ ಇಲ್ಲ ಎನ್ನುವ ಮನೋಭಾವ ಕೂಡ ಈಗ ಉದ್ಯಮಿಗಳಲ್ಲಿ ಬಂದಿದೆ. ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ವೆಚ್ಚದ ಮೇಲೆ ಕಡಿವಾಣ ಹಾಕುವುದು ಸಹಜ. ಈ ದಿಸೆಯಲ್ಲಿ ಉತ್ತರ ಕರ್ನಾಟಕದ ನಗರಗಳನ್ನು ಆಯ್ದುಕೊಂಡರೆ ಲಾಭವಾಗಲಿದೆ ಎಂಬುದು ಅವರಿಗೆ ಮನವರಿಕೆಯಾಗಿದೆ.

ಇಲ್ಲಿ ಸಾಕಷ್ಟು ಮಾಲ್​ಗಳು, ಪಿವಿಆರ್ ಸಿನಿಮಾ, ಸಮೀಪದಲ್ಲಿ ಗೋವಾ, ದಾಂಡೇಲಿಯಂತಹ ಪ್ರವಾಸಿ ತಾಣಗಳು, ಹತ್ತಾರು ಹೋಟೆಲ್​ಗಳು ಉದ್ಯಮ ಸ್ಥಾಪನೆಗೆ ಪೂರಕವಾಗಲಿವೆ. ಒಟ್ಟಾರೆ ಹೇಳಬೇಕೆಂದರೆ ಹೂಡಿಕೆದಾರರಿಗೆ ಈ ಭಾಗಕ್ಕೆ ಬರಲು ಇದು ಸುಸಮಯ. ಒಟ್ಟಾರೆ 200 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಅನುಕೂಲಗಳು ಇಲ್ಲಿವೆ ಎನ್ನುತ್ತಾರೆ ಸಂತೋಷ ಹುರುಳಿಕೊಪ್ಪಿ.

ಈ ಭಾಗದಲ್ಲಿ ಐಟಿ- ಬಿಟಿ ಬೆಳವಣಿಗೆಗ ವಿಪುಲ ಅವಕಾಶಗಳಿವೆ. ಬಹಳಷ್ಟು ಕಂಪನಿಗಳು ಆಸಕ್ತಿ ತೋರಿವೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಹೆಚ್ಚು ಐಟಿ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಜತೆಗೆ ಉತ್ಪಾದನೆ, ಸೇವಾ ಕ್ಷೇತ್ರದ ಜನರೂ ಬರಲಿದ್ದಾರೆ. | ಸಂತೋಷ ಹುರುಳಿಕೊಪ್ಪಿ, ಎನ್​ಎಸ್ ಇನ್ಪೋಟೆಕ್ ಮಾಲೀಕ