ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಸುಸ್ಥಿರ ಹಾಗೂ ಸಾವಯವ ಕೃಷಿಯ ಅರಿವು ಮೂಡಿಸಲು ಜು.೨೭ರಿಂದ ೨೯ರವರೆಗೆ ರೈತರ ನಡೆ ಸಾವಯುವ ಕೃಷಿ ಕಡೆ' ಘೋಷವಾಕ್ಯದಡಿ ವಿಭಾಗ ಮಟ್ಟದಕೃಷಿ ಜಾತ್ರೆ'ಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್ ಹೇಳಿದರು.
ಪ್ರಪ್ರಥಮ ಬಾರಿಗೆ ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ಸಾಧಕ ರೈತರನ್ನು ಪ್ರೋತ್ಸಾಹಿಸಲು ಅರ್ಥಪೂರ್ಣ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.೨೭ರಂದು ಬೆಳಗ್ಗೆ ೧೦ಕ್ಕೆ ಕನ್ಹೇರಿ ಮಠದ ಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮೇಳ ಉದ್ಘಾಟಿಸಿ, ಸಾವಯವ ಕೃಷಿ ಉಪನ್ಯಾಸ ನೀಡಲಿದ್ದಾರೆ. ವಿವಿಧ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಮುತ್ಯಾನ ಬಬಲಾದ ಮಠದ ಶ್ರೀ ಗುರುಪಾದಲಿಂಗ ಶಿವಯೋಗಿ, ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಬೆಳಗುಂಪಾದ ಅಭಿನವ ಪರುತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್ ಸೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುವರು. ಸಂಜೆ ೫ಕ್ಕೆ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ಸಾಲದ ಹೆಣ ನಾಟಕ ಪ್ರದರ್ಶನ ಸೇರಿ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.
ಕೆಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಜಗದೀಶ ಗಾಜರೆ, ಚಂದ್ರಶೇಖರ ಕೋಬಾಳ, ಉತ್ತಮ ಬಜಾಜ್, ಬಸವರಾಜ ಮಂಗಲಗಿ, ರವೀಂದ್ರ ಮಾದನಶೆಟ್ಟಿ, ಶರಣು ಪಪ್ಪಾ, ಸಂತೋಷ ಲಂಗರ, ಅಭಿಜೀತ ಪಟ್ಟಣಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ ಇತರರಿದ್ದರು.
ರೈತರಿಗೆ ಕೃಷಿ ಮಾಹಿತಿ, ಪ್ರಶಸ್ತಿ: ಕೃಷಿ ಮೇಳದಲ್ಲಿ ೧೭೦ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗುವುದು. ೧೪೦ ಮಳಿಗೆ ನೋಂದಣಿಯಾಗಿದ್ದು, ೨೦ಕ್ಕಿಂತ ಹೆಚ್ಚು ಸರ್ಕಾರಿ ಇಲಾಖೆಗಳ ಮಳಿಗೆಗಳು ಇರಲಿವೆ. ಮೊದಲ ದಿನ ಐದು ಸಾವಿರ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜು.೨೮ರಂದು ಸಂಜೆ ೫ಕ್ಕೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಸಾಧನೆಗೈದ ೧೪ ರೈತರಿಗೆ ರೈತ ಸಾಧಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಶಶಿಕಾಂತ ಬಿ.ಪಾಟೀಲ್ ತಿಳಿಸಿದರು.
ವಿವಿಧ ಸಂಸ್ಥೆಗಳ ಸಾಥ್: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿರುವ ಕೃಷಿ ಮೇಳಕ್ಕೆ ರಾಯಚೂರಿನ ಕೃಷಿ ವಿಜ್ಞಾನ ವಿವಿ, ಬೀದರನ ಪಶುವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿವಿ, ಶರಣಬಸವೇಶ್ವರ ವಿವಿ, ಕೇಂದ್ರೀಯ ವಿವಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ, ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಎಪಿಎಂಸಿ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ, ದಾಲ್‌ಮಿಲ್ರ‍್ಸ್ ಅಸೋಸಿಯೇಷನ್, ಅಕ್ಕಿ ವ್ಯಾಪಾರಸ್ಥರ ಸಂಘ, ಕೃಷಿ ಪರಿಕರ ಮಾರಾಟಗಾರ ಸಂಘ, ವಿಕಾಸ ಅಕಾಡೆಮಿ ಸಹಯೋಗ ನೀಡುತ್ತಿವೆ ಎಂದು ತಿಳಿಸಿದರು.