ಚಳ್ಳಕೆರೆ: ಇಲ್ಲಿನ ವಾಲ್ಮೀಕಿ ನಗರದಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ನಡೆದ 352ನೇ ಮಧ್ಯಾರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ರಾಯರ ಬೃಂದಾವನಕ್ಕೆ ನೂತನ ಬೆಳ್ಳಿ ಕವಚ ಸಮರ್ಪಣೆಯೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಮಂತ್ರಾಲಯ ಮೂಲ ಮಠದ ಪ್ರಧಾನ ಅರ್ಚಕ ಆನಂದಾಚಾರ್, ರಾಘವೇಂದ್ರಚಾರ್ ಸಮ್ಮುಖದಲ್ಲಿ ನೆರವೇರಿದ ನೈರ್ಮಲ್ಯ ವಿಸರ್ಜನೆ, ಅಭಿಷೇಕ, ಪಂಚಾಮೃತ ಅಭಿಷೇಕ, ಬೆಳ್ಳಿ ಕವಚಧಾರಣೆ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ರಾಜ್ಯದ 82 ಮಠಗಳು ಸೇರಿದಂತೆ ಇಡೀ ದೇಶದಲ್ಲಿನ ಮಠಗಳಲ್ಲಿ ರಾಯರಿಗೆ ಮಧ್ಯಾರಾಧನೆ ಸಂಕಲ್ಪ ನಡೆಯುತ್ತದೆ. ಸಮಾಜದ ಮನುಕುಲಕ್ಕೆ ಶ್ರೇಯಸ್ಸು ಬಯಸಿ ನೆರವೇರಿಸುವ ಆರಾಧನಾ ಮಹೋತ್ಸವದಂತೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಸಂಕಲ್ಪ ಭಕ್ತರಲ್ಲಿದೆ ಎಂದರು.
ಆ.30ರಿಂದಲೂ ಆರಾಧನಾ ಮಹೋತ್ಸವ ಅಂಗವಾಗಿ ನೆರವೇರಿದ ಧ್ವಜಾರೋಹಣ, ಗೋಪೂಜಾ, ಪ್ರಾರ್ಥನೋತ್ಸವ, ಶಾಖೋತ್ಸವ, ಧನ-ಧಾನ್ಯ ಪೂಜಾ, ಶ್ರೇಯ ಪ್ರಾರ್ಥನೆ, ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮಗಳ ಬಳಿಕ ಬೃಂದಾವನಕ್ಕೆ ಬೆಳ್ಳಿ ಕವಚ ಸಮರ್ಪಣೆ ಮಾಡಲಾಯಿತು.
ರಾಯರ ಬೆಳ್ಳಿ ರಥಕ್ಕೆ ಸಂಕಲ್ಪ:
ರಾಯರಿಗೆ ಬೆಳ್ಳಿ ರಥವನ್ನು ನಿರ್ಮಾಣ ಮಾಡಲು ಭಕ್ತರು ಸಂಕಲ್ಪ ಮಾಡಲಾಗಿದೆ. ಸುಮಾರು 50 ಲಕ್ಷ ಮೌಲ್ಯದ ಬೆಳ್ಳಿ ರಥ ನಿರ್ಮಾಣಕ್ಕೆ ರಾಯರ ಸೇವೆ ಮಾಡಬಯಸುವ ಭಕ್ತರು ತಮ್ಮ ಶಕ್ತ್ಯಾನುಸಾರವಾಗಿ ಬೆಳ್ಳಿರಥ ನಿರ್ಮಾಣಕ್ಕೆ ಧನ ಸಹಾಯ ಮಾಡಬಹುದು. ಈ ಮೂಲಕ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಪೂಜಾ ಕಾರ್ಯದಲ್ಲಿ ಭಕ್ತರಲ್ಲಿ ಮನವಿ ಮಾಡಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ನಗರದಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಧಾರ್ಮಿಕ ವಿಶೇಷತೆಯಲ್ಲಿ ಪ್ರಧಾನವಾಗಿದೆ. ಕಳೆದ ವರ್ಷ ಸ್ಥಾಪಿತವಾದ ರಾಯರ ಮಠದಲ್ಲಿ 2ನೇ ವರ್ಷಾಚರಣೆ ಮತ್ತು 352ನೇ ಆರಾಧನಾ ಮಹೋತ್ಸವ ನೆರವೇರಿರುವುದು ಪೂಜಾ ಕಾರ್ಯಗಳ ಮೂಲಕ ಭಕ್ತರಿಗೆ ರಾಯರ ಆಶೀರ್ವಾದ ಸಿಕ್ಕಂತಾಗಿದೆ ಎಂದು ಹೇಳಿದರು.
ರಜತ ಮಹೋತ್ಸವ ಸಮಿತಿ ಸದಸ್ಯರಾದ ಶ್ರೀನಿವಾಸ್ ಎನ್. ಭಟ್, ಗುರುನಾಥ್ ಎನ್.ಭಟ್, ಬಿ.ವಿ.ಅಮರನಾಥ್ ಗುಪ್ತಾ, ಕಿಶೋರ್‌ಕುಮಾರ್ ಶೆಟ್ಟಿ, ಎಂ.ಪಿ. ಗುರುರಾಜ್, ಬಾಹುಬಲಿ ಜೈನ್ ಗಂಗಾಧರ್ ಶೆಟ್ಟಿ, ಜಿ. ಕೃಷ್ಣಮೂರ್ತಿ, ಎನ್.ಎಂ. ಅಮರನಾಥ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.