ಜಿಲ್ಲೆ

ಬೂವನಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಚಾಲನೆ

ಹಾಸನ: ನಗರ ಸಮೀಪದ ಬೂವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕಿ ಪಾಠಶಾಲೆ ಆವರಣದಲ್ಲಿ ಭಾನುವಾರ ಜೀವ ಜ್ಯೋತಿ ಆಸ್ಪತ್ರೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು.

ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ನಂತರ ಸಾಲುಮರದ ತಿಮ್ಮಕ್ಕನವರ ಪರವಾಗಿ ಮಾತನಾಡಿದ ಪುತ್ರ ಉಮೇಶ್ ಬಳ್ಳೂರು, ಯಾವುದೇ ಸಂಘ-ಸಂಸ್ಥೆಯಾಗಲಿ ಸಮಾಜಮುಖಿಯಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವ ಧೋರಣೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದರು.

ನಿಸ್ವಾರ್ಥ ಸೇವೆಗೆ ಬೆಲೆಯಿದೆ ಎಂಬುದಕ್ಕೆ ಸಾಲುಮರದ ತಿಮ್ಮಕ್ಕನವರು ನಮಗೆ ಜೀವಂತ ನಿದರ್ಶನ. ಮಕ್ಕಳಿಲ್ಲದ ಕೊರಗನ್ನು ನೀಗಿಸಿಕೊಳ್ಳಲು ಅವರು ಕಂಡುಕೊಂಡ ನಿಸ್ವಾರ್ಥ ಪರಿಸರ ಪ್ರೇಮ ಇಂದು ಅವರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಇದನ್ನು ಎಲ್ಲರೂ ಮನಗಾಣಬೇಕಿದೆ ಜೊತೆಗೆ ಅವರ ಬದುಕಿನಲ್ಲಿ ಅಳವಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಮನುಷ್ಯ ಇಂದು ಪರಿಸರ ಕಾಳಜಿ ಮೆರೆಯುವಲ್ಲಿ ವಿಫಲನಾಗುತ್ತಿದ್ದಾನೆ. ಭೂಮಿಗೆ ವಿಷ ಬೆರೆಸಿ ಕಲುಷಿತಗೊಳಿಸುತ್ತಿದ್ದಾನೆ. ಹಿಂದೆ ಮಣ್ಣಿನಲ್ಲಿ ಪರಿಮಳವಿತ್ತು ಇಂದು ವ್ಯತಿರಿಕ್ತವಾದ ಪರಿಸ್ಥಿತಿ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ಗ್ರಾಮೀಣ ಭಾಗದ ಜನತೆಗೆ ಹೆಚ್ಚೆಚ್ಚು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲೆಡೆಯಲ್ಲಿಯೂ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಮತಾ ರಾವ್, ಉದ್ಯಮಿ ವಿಜಯ ಕುಮಾರ್, ತಾಪಂ ಮಾಜಿ ಸದಸ್ಯ ಬಿ.ಇ ಜಯರಾಂ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್ ತುಳಸಿರಾಮ್, ಬಿ.ಡಿ ಕರಿಯಯ್ಯ,ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಲ್ಲೇಶ್, ಗ್ರಾಮದ ಮುಖಂಡ ಲಕ್ಷ್ಮಣ್,ಬಿ.ಈ ಜಗದೀಶ್,ನಿವೃತ್ತ ಶಿಕ್ಷಕ ರಾಮಕೃಷ್ಣ, ಆಸ್ಪತ್ರೆಯ ವೈದ್ಯರುಗಳಾದ ಎ.ಇ ಚಂದನ್, ಅರ್ಜುನ್ ದೇವ್, ಮನು ನಾಗೇಶ್, ಭಾವಿಕ ವೈ.ಎಂ ಇತರರು ಹಾಜರಿದ್ದರು.

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 600ಕ್ಕೂ ಹೆಚ್ಚು ಮಂದಿ ಹೆಸರು ನೊಂದಾಯಿಸಿ ಅಗತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ 14 ಮಂದಿ ತಜ್ಞ ವೈದ್ಯರ ತಂಡ ವಿವಿಧ ಕಾಯಿಲೆಗಳಿಗೆ ತುತ್ತಾದವರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಿದರಲ್ಲದೆ, ಆಸ್ಪತ್ರೆ ವತಿಯಿಂದ ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.