ಹಾಸನ: ಭಾರೀ ಕುತೂಹಲ ಮೂಡಿಸಿದ್ದ ಬೂವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಸಾಲಗಾರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 1 ಮತದ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದ ಬಿ.ಆರ್.ಬೊಮ್ಮೇಗೌಡ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಒಟ್ಟು 11 ಸದಸ್ಯ ಬಲದ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಬೊಮ್ಮೇಗೌಡ ಹಾಗೂ ಗಣೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದ್ರಮ್ಮ ಹಾಗೂ ವಿಜಯಲಕ್ಷ್ಮೀ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆದ ಚುನಾವಣೆಯಲ್ಲಿ ಬಿ.ಆರ್. ಬೊಮ್ಮೇಗೌಡ ಹಾಗೂ ವಿಜಯಲಕ್ಷ್ಮೀ ಅವರು ತಲಾ 6 ಮತ ಪಡೆದು ಆಯ್ಕೆಯಾದರು.
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿದಿರುವುದಕ್ಕೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಅಭಿನಂದನೆ ಸಲ್ಲಿಸಿದ್ದು, ತಮ್ಮ ಕಡೆಯಿಂದಲೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಜಿಪಂ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ತಾಪಂ ಮಾಜಿ ಅಧ್ಯಕ್ಷ ಜಯರಾಂ, ಬೂವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ತುಳಸಿರಾಂ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಲ್ಲೇಶ ಹಾಗೂ ಬೂವನಹಳ್ಳಿ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಬೆಂಬಲಿಗರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಜಯಘೋಷ ಮೊಳಗಿಸಿ, ಸಿಹಿ ಹಂಚಿ ಕುಣಿದಾಡಿದರು.