ಜಿಲ್ಲೆ

ಬೂದುಬಾಳು ಕೆರೆಗೆ ನೀರು ತಂಬಿಸಿ

ಹನೂರು: ಗ್ರಾಮದ ಕೆರೆಗೆ ಕಾವೇರಿ ನದಿ ನೀರನ್ನು ತುಂಬಿಸುವಂತೆ ತಾಲೂಕಿನ ಬೂದುಬಾಳು ಗ್ರಾಮಸ್ಥರು ಮಂಗಳವಾರ ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಮನವಿ ಮಾಡಿದರು.

ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ದೇಗುಲವಿದ್ದು, ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಆದರೆ ಬೇಸಿಗೆ ವೇಳೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಇದರಿಂದ ಭಕ್ತರು ಹಾಗೂ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇತ್ತ ಜಾನುವಾರುಗಳಿಗೂ ನೀರಿನ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಗ್ರಾಮ ಸಮೀಪವೇ ಇರುವ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿರುವ ನೀರಿನ ಘಟಕದಿಂದ ಗ್ರಾಮದ ಕೆರೆಗೆ ನೀರು ತುಂಬಿಸಬೇಕು. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗುವುದರಿಂದ ಕುಡಿಯುವ ನಿರಿನ ಸಮಸ್ಯೆ ನೀಗಲಿದೆ. ಜತೆಗೆ ಜಾನುವಾರುಗಳಿಗೂ ಅನುಕೂಲವಾಗಲಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ರಾಮನಗುಡ್ಡೆ ಡ್ಯಾಂಗೆ ನೀರು ಪೂರೈಸಲು ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವುದರ ಮೂಲಕ ಡ್ಯಾಂಗೆ ನೀರು ಹರಿಸುವಂತೆ ನೀರಾವರಿ ಇಲಾಖೆಯ ಎಇಇ ಕರುಣಾಮಯಿ ಅವರಿಗೆ ಸೂಚಿಸಿದರು. ನೀರಾವರಿ ಇಲಾಖೆಯ ಎಇ ಬಸವೇಶ್, ಮುಖಂಡರಾದ ಮಹದೇವ, ವಿಜಯಕುಮಾರ್, ವೆಂಕಟೇಶ್, ರಾಜೇಶ್, ಕುಮಾರ್ ಇತರರು ಇದ್ದರು.