ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
ಬೇಸಿಗೆ ಸಮೀಪಿಸುತ್ತಿದ್ದಂತೆ ಹಾವುಕಡಿತ ಪ್ರಕರಣ ಹೆಚ್ಚಾಗುತ್ತಿದ್ದು, ಅಪಾಯದಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಅಗತ್ಯ.
ಹೌದು...! ಬೇಸಿಗೆ ಬಿಸಿ ಹಾಗೂ ಸೆಕೆಯಿಂದಾಗಿ ಹಾವು ಸೇರಿ ಇತರ ಸರಿಸೃಪಗಳು ಉಷ್ಣ ತಾಳದೆ ಹೊರಭಾಗಕ್ಕೆ ಬರುತ್ತವೆ. ತಂಪಾದ ವಾತಾವರಣದಲ್ಲಿ ಸಂಚರಿಸುವಾಗ, ಅಪಾಯ ಎದುರಾದಾಗ, ಮನುಷ್ಯ, ಸಾಕು ಪ್ರಾಣಿಗಳಿಗೆ ಕಚ್ಚುತ್ತವೆ. ಅದರಲ್ಲೂ ರಾತ್ರಿಹೊತ್ತಿನಲ್ಲಿ ತೋಟಗಳಿಗೆ ನೀರು ಹಾಯಿಸಲು ಹೋಗುವ ರೈತರು ಕತ್ತಲಲ್ಲಿ ಕಾಣದೆ ಅವುಗಳನ್ನು ತುಳಿದಾಗ ಕಚ್ಚುತ್ತವೆ. ಅಂತೆಯೇ, ಈ ರೀತಿ ಪ್ರಕರಣ ಹೆಚ್ಚುತ್ತಿವೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ ಕೆಲವರು ವಿಷವೇರಿ ಮೃತಪಟ್ಟರೆ, ಮತ್ತಷ್ಟು ಮಂದಿ ಹಾವು ಕಡಿದ ಭಯದಿಂದಲೇ ಜೀವ ಬಿಡುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ರೈತರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಸಂತ್ರಸ್ತರಿಗೆ ಪರಿಹಾರ: ಹಾವುಕಡಿತದಿಂದ ಮೃತಪಟ್ಟ ಕುಟುಂಬಕ್ಕೆ ಉಪವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ 2 ಲಕ್ಷ ರೂ. ಪರಿಹಾರ ಧನ ನೀಡಲು ಸರ್ಕಾರದಿಂದ ಅವಕಾಶವಿದೆ. ಪಕೃತಿ ಮಾನವ ನಡುವಿನ ಸಂರ್ಷದ ಪ್ರಕರಣಗಳಿಂದ ರೈತರು ಮೃತಪಟ್ಟರೆ ಈಗಾಗಲೇ ನೀಡುತ್ತಿರುವ ಪರಿಹಾರಧನವನ್ನು ಕನಿಷ್ಠ 10 ಲಕ್ಷ ರೂಪಾಯಿಗಾದರೂ ಹೆಚ್ಚಿಸಬೇಕಿದೆ. ಇದರಿಂದ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲಿದೆ. ಅದಲ್ಲದೇ ತಾಲೂಕಿಗೆ ಒಬ್ಬರಂತೆ ಉರಗ ತರನ್ನು ಸರ್ಕಾರ ನೇಮಿಸಬೇಕಿದೆ ಎಂಬ ಕೂಗು ಜೋರಿದೆ.
ಮೃತಪಟ್ಟವರೆಲ್ಲ ರೈತರೇ: ತಾಲೂಕಿನಲ್ಲಿ ಹಾವು ಕಡಿತದ ಒಟ್ಟು ಪ್ರಕರಣಗಳ ಪೈಕಿ ನಾಲ್ವರು ಮೃತಪಟ್ಟಿದ್ದು, ಕಸಬಾ ಹೊಬಳಿಯ ಕಲ್ಲೇನಹಳ್ಳಿ ಮುನಿಯಪ್ಪ ಹಾಗೂ ಕಂದಿಕೆರೆ ಹೋಬಳಿಯ ಕೃಷ್ಣಮೂರ್ತಿ ಅವರು ತೋಟದಲ್ಲಿ ನೀರು ಹಾಯಿಸಲು ಹೋದಾಗ ಹಾವು ಕಚ್ಚಿತ್ತು. ಇನ್ನು ಹುಳಿಯಾರು ಹೋಬಳಿಯ ನೂಲೆನೂರು ಗ್ರಾಮದ ಕರಿಯಮ್ಮ ಅವರು ಜಾನುವಾರುಗಳಿಗೆ ಹುಲ್ಲು ಕೊಯ್ಯಲು ಹೋದಾಗ, ಹಂದನಕೆರೆ ಹೋಬಳಿಯ ಮಲ್ಲಿಗೆರೆ ಗ್ರಾಮದ ಲೊಕೇಶ್ ಅವರು ತೋಟದ ಕೆಲಸದ ವೇಳೆ ಹಾವು ಕಡಿತದಿಂದ ಮೃತಪಟ್ಟಿರುವುದು ಕೃಷಿ ಇಲಾಖೆಯಲ್ಲಿ ವರದಿಯಾಗಿದೆ. ಹಾವುಕಡಿತದಿಂದ ಮೃತಪಟ್ಟ ಪ್ರಕರಣಗಳ ಪೈಕಿ ನಾಲ್ವರೂ ರೈತರೆ ಆಗಿದ್ದು, ಅದರಲ್ಲೂ ತೋಟದಲ್ಲಿ ನೀರು ಹಾಯಿಸುವ ವೇಳೆಯಲ್ಲೇ ಹಾವು ಕಡಿತಕ್ಕೆ ಒಳಗಾದ ಇಬ್ಬರು ಮೃತಪಟ್ಟಿರುವುದರಿಂದ ರೈತರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ.
ಪರಿಸರ ಇಂಜಿನಿಯರ್ ಅಸ್ತಿತ್ವಕ್ಕೆ ಕುತ್ತು: ಹಾವು ಸೇರಿ ಸರಿಸೃಪಗಳು ಪರಿಸರದ ಇಂಜಿನಿಯರ್ಗಳಂತೆ ಕಾರ್ಯನಿರ್ವಹಿಸುತ್ತವೆ. ಅದರಲ್ಲೂ ರೈತರ ಸಹಕಾರಿಯಾದ ಹಾವುಗಳು ಒಮ್ಮೊಮ್ಮೆ ತಮಗೆ ಅಪಾಯ ತಂದೊಡ್ಡಬಹುದಾದ ಸಂದರ್ಭದಲ್ಲಿ, ಇಲ್ಲವೇ ಆಕಸ್ಮಿಕವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಆದರೆ, ಆಧುನಿಕ ಕೃಷಿ ಪದ್ಧತಿಯಿಂದಾಗಿ ಹಾವುಗಳ ಅಸ್ತಿತ್ವಕ್ಕೆ ಕುತ್ತು ಎದುರಾಗಿದೆ. ಹಾವಿನಂತಹ ಸರಿಸೃಪಗಳ ಆವಾಸ ಸ್ಥಾನ ಕೃಷಿ ಚಟುವಟಿಕೆ ಹಾಗೂ ಹಲವು ಕಾರಣಗಳಿಂದ ದಿನೇದಿನೆ ನಾಶವಾಗುತ್ತಿದೆ. ಆಹಾರದ ಅಭಾವವೂ ಇದೆ. ಇನ್ನು ಕಪ್ಪೆ, ಕೀಟ, ಇಲಿ, ಹೆಗ್ಗಣದ ಬೇಟೆಗೆ ಹಾವುಗಳು ಹೊಂಚುಹಾಕಿದ್ದಾಗ ಯಾರಾದರೂ ತೊಂದರೆ ಮಾಡಿದರೆ ಸಾಮಾನ್ಯವಾಗಿ ಮನುಷ್ಯರಂತೆ ಅವೂ ಆಕ್ರೋಶಗೊಂಡು, ಎದುರಾಳಿ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ರೈತರಿಗೆ ಅರಿವು ಇರಬೇಕು.
ತಾಲೂಕಿನಲ್ಲಿ ಕಳೆದ 2024ರ ಡಿಸೆಂಬರ್ ಅಂತ್ಯಕ್ಕೆ 122ಜನರಿಗೆ ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಕಳೆದ 2024ರ ಏಪ್ರೀಲ್ನಿಂದ ಜೂನ್ವರೆಗೆ ಅಂದರೆ ಬೇಸಿಗೆಯ ಅವಧಿಯಲ್ಲಿ ತಾಲೂಕಿನಲ್ಲಿ 51 ಜನರು ಹಾವು ಕಡಿತಕ್ಕೆ ಒಳಗಾಗಿದ್ದರೆ, 2024ರ ಜುಲೈನಿಂದ ಸೆಪ್ಟೆಂಬರ್ವರೆಗೆ 32 ಪ್ರಕರಣ ದಾಖಲಾಗಿವೆ. ಇನ್ನು ಅಕ್ಟೋಬರ್ 2024ರಿಂದ ಡಿಸೆಂಬರ್ವರೆಗೆ 39 ಸೇರಿ ಒಟ್ಟು 122 ಪ್ರಕರಣ ದಾಖಲಾಗಿವೆ.ಹಾವುಗಳ ಬಗ್ಗೆ ಹಾಗೂ ಹಾವು ಕಡಿತಕ್ಕೆ ಒಳಗಾದಾಗ ಪ್ರಥಮ ಚಿಕಿತ್ಸೆ ಹಾಗೂ ಕೆಲ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಈಗಾಗಲೇ ಕೃಷಿಕಾರ್ಯಕ್ರಮಗಳಡಿ ಅರಿವು ಮೂಡಿಸಲಾಗುತ್ತಿದೆ. ಶ್ರೀದಲ್ಲಿ ವೈದ್ಯರಿಂದ ಪ್ರಥಮಚಿಕಿತ್ಸೆಯ ವಿಧಾನದ ಪ್ರಾತ್ಯಕೆ ಮೂಲಕ ಜಾಗೃತಿ ಮೂಡಿಸಲಾಗುವುದು. ಇನ್ನು ಹಾವು ಕಡಿತಕ್ಕೆ ಒಳಗಾದ ರೈತರು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು.| ಶಿವರಾಜ್ಕುಮಾರ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ರಾತ್ರಿ ಹೊತ್ತು ತೋಟಗಳಿಗೆ ನೀರು ಹಾಯಿಸುವ ಸಂದರ್ಭ ದಲ್ಲಿ ಅನೇಕಬಾರಿ ಹೆಬ್ಬಾವುಗಳನ್ನೇ ನೋಡಿದ್ದೇವೆ. ಹಾವು ಕಡಿತದಿಂದ ತಪ್ಪಿಸಿಕೊಳ್ಳಲು ಶೂಗಳನ್ನು ಧರಿಸುವುದು ಸೇರಿದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಇನ್ನು ರಾತ್ರಿಯ ಹೊತ್ತಿನ ಬದಲು ಹಗಲಿನಲ್ಲಿ ವಿದ್ಯುತ್ ನೀಡಿದರೆ ರೈತರಿಗೂ ಅನುಕೂಲವಾಗಲಿದೆ.
| ಲೋಕೇಶ್ ಸಿ.ಎನ್ ರೈತ