ಜಿಲ್ಲೆ

ಬುರ್ಖಾ ಧರಿಸಿ ಅಂಗಡಿಗೆ ಬಂದಿದ್ದ ವೈದ್ಯ!

Dharwad

ಹುಬ್ಬಳ್ಳಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೈದ್ಯನೊಬ್ಬ ಬುರ್ಖಾ ಧರಿಸಿ ವಾಚ್ ಅಂಗಡಿಗೆ ಬಂದು 20 ಸಾವಿರ ರೂ. ಮೌಲ್ಯದ ವಾಚ್ ಖರೀದಿಸಿದ್ದ. ಆತನ ವರ್ತನೆ ಕಂಡು ಅನುಮಾನಗೊಂಡ ವಾಚ್ ಅಂಗಡಿಯವರು ಪೊಲೀಸರ ವಶಕ್ಕೆ ಆತನನ್ನು ಒಪ್ಪಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ನೇತ್ರವೈದ್ಯ ಡಾ. ವಸಂತರಾವ್ ಬುರ್ಖಾ ಧರಿಸಿ ಓಡಾಡುತ್ತಿದ್ದ ವ್ಯಕ್ತಿ.

ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ವಸಂತರಾವ್, ರಾತ್ರಿ ಬುರ್ಖಾ ಧರಿಸಿಕೊಂಡು ನ್ಯಾಶನಲ್ ಮಾರ್ಕೆಟ್​ನ ಟೈಟಾನ್ ವಾಚ್ ಮಳಿಗೆಯಲ್ಲಿ 20 ಸಾವಿರ ರೂ. ವಾಚ್ ಖರೀದಿಸಿದ್ದರು. ಸಂಶಯಗೊಂಡು ಅಂಗಡಿಯವರ ಮಾಹಿತಿ ಆಧರಿಸಿ ಶಹರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮ ನಿವೇದನೆಗಾಗಿ ದುಬಾರಿ ವಾಚ್: ಡಾ. ವಸಂತರಾವ್ ಮದುವೆಯಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದುಬಾರಿ ವಾಚ್ ಖರೀದಿಸಿ ಯಾವು ದಾದರೂ ಯುವತಿಗೆ ಆ ವಾಚ್ ನೀಡಿ ಪ್ರೇಮ ನಿವೇದನೆ ಮಾಡಬೇಕು ಎಂದುಕೊಂಡಿದ್ದರು. ಹಾಗಾಗಿ, ಯಾರಿಗೂ ಗೊತ್ತಾಗಬಾರದು ಎಂದು ಬುರ್ಖಾ ಧರಿಸಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಶಹರ ಠಾಣೆ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ತಿಳಿಸಿದ್ದಾರೆ.