ಜಿಲ್ಲೆ

ಬುರುಡೆ ಬಿಡುವುದು ರೇವಣ್ಣನ ಚಾಳಿ; ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ವಾಗ್ದಾಳಿ

Hassan - Mohan Kanthur

ಹಾಸನ: ಜಿಲ್ಲೆಯಲ್ಲಿ ಪಿಡಿಒಗಳ ವರ್ಗಾವಣೆ ದಂಧೆ ನಡೆದಿದೆ ಎಂದು ಎಚ್.ಡಿ. ರೇವಣ್ಣ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಬುರುಡೆ ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಆರೋಪ ಮಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮಾತನಾಡಿರುವ ರೇವಣ್ಣ ಅವರಿಗೆ ಯಾವ ನೈತಿಕತೆ ಇದೆ. ಸಚಿವರಾಗಿ, ಶಾಸಕರಾಗಿರುವ ಇವರಿಗೆ ಸಾಮಾನ್ಯ ಜ್ಞಾನ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿ ನಡೆಸಿ ಏಕವಚನದಲ್ಲೇ ಆಕ್ರೋಶ ಹೊರಹಾಕಿದರು.

ಸರ್ಕಾರ ಬದಲಾವಣೆಯಾದ ಮೇಲೆ ಆಡಳಿತದ ದೃಷ್ಟಿಯಿಂದ ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪಿಡಿಒಗಳ ವರ್ಗಾವಣೆ ದಂಧೆ ನಡೆದಿದೆ ಎಂದು ಹೇಳಿರುವ ರೇವಣ್ಣ ಇದರ ಪಾಲುದಾರರಿರಬೇಕು. ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ಇಂತಹ ಅನುಭವಗಳು ಸಾಕಷ್ಟಿದೆ. ಆ ಹಿನ್ನೆಲೆಯಲ್ಲಿ ಮಾತನಾಡುತ್ತಿರಬೇಕು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಇದೇ ರೇವಣ್ಣ ಮತ್ತು ಅವರ ಸಂಬಂಧಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಈ ಹಿಂದೆ ಎಷ್ಟು ಜನ ಪಿಡಿಒಗಳನ್ನು ಜಾಗ ತೋರಿಸದೆ ತಾಲೂಕು ಪಂಚಾಯಿತಿಯಲ್ಲಿ ಇರಿಸಿಕೊಂಡು ಸಂಬಳ ಕೊಟ್ಟಿದ್ದರು ಎಂಬುದನ್ನು ಮೊದಲ ತಿಳಿಸಲಿ. ಬೇಕಿದ್ದರೆ ದಾಖಲೆ ಸಮೇತ ನಾನು ಅದನ್ನು ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಗ ಸೋಲುತ್ತಾನೆ ಎಂಬ ಭಯದಿಂದ ರೇವಣ್ಣ ಮನಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಸುಪುತ್ರನಿಗೆ ರಾಜಕೀಯದ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ರೇವಣ್ಣ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗಳಿ ಮಾತನಾಡುವುದು, ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ ಕೆಲಸ ಮಾಡಿಸಿಕೊಂಡು ಬರುವಂತಹ ಪ್ರವೃತ್ತಿ ಇದೆ. ಅವರಿಗೆ ನಿಜವಾಗಲೂ ತಾಕತ್ತಿದ್ದರೆ ಸದನದಲ್ಲಿ ಮತ್ತು ಸಚಿವರ ಎದುರಿಗೆ ನೇರವಾಗಿ ಮಾತನಾಡಲಿ ಎಂದು ಸವಾಲು ಹಾಕಿದರು.

ಜಿಲ್ಲೆಯಲ್ಲಿ ರೇವಣ್ಣ ಈ ರೀತಿ ಮಾತನಾಡುತ್ತಿದ್ದರೆ ಅವರ ಸಹೋದರ ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಇದೆ ಎಂದು ನಾಟಕವಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಕೂಡ ಮುಖ್ಯಮಂತ್ರಿಗಳ ಮಕ್ಕಳು ರಾಜಕೀಯದಲ್ಲಿ ಇದ್ದಾರೆ. ಅವರು ಶಾಸಕರಾಗಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಗೆಲುವು ಶತಃಸಿದ್ಧ

ಜೆಡಿಎಸ್ ಸಹವಾಸ ಮಾಡಿ ಜಿಲ್ಲೆಯಲ್ಲಿ ನಾವು ಈಗ ಈ ಸ್ಥಿತಿಯಲ್ಲಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನಗೆ ಅಥವಾ ಸಾಮಾನ್ಯ ಕಾರ್ಯಕರ್ತ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮೆಲ್ಲರದ್ದು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಗೆಲುವು ಶತಃಸಿದ್ಧ ಎಂದು ಗೋಪಾಲಸ್ವಾಮಿ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುರುಳಿ ಮೋಹನ್, ಶ್ರೇಯಸ್ ಪಟೇಲ್ ಇದ್ದರು.