ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಮಕ್ಕಳಲ್ಲಿ ಬುನಾದಿ ಕೌಶಲಗಳನ್ನು ಅಭಿವೃದ್ಧಿಪಡಿಸಲು ಓದು ಕರ್ನಾಟಕ ಕಾರ್ಯಕ್ರಮ ಪೂರಕವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಪ್ರಥಮ್ ಶಿಕ್ಷಣ ಪ್ರತಿಷ್ಠಾನ ಮೈಸೂರು ಇವರ ಸಹಭಾಗಿತ್ವದಲ್ಲಿ ನಗರದ ಡಯಟ್‌ನಲ್ಲಿ ಜಿಲ್ಲೆಯ ಎಲ್ಲ ಸಿಆರ್‌ಪಿಗಳಿಗೆ ಮಂಗಳವಾರ ಆಯೋಜಿಸಿದ್ದ ಓದು ಕರ್ನಾಟಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ 4 ಮತ್ತು 5ನೇ ತರಗತಿ ಮಕ್ಕಳಲ್ಲಿ ಬುನಾದಿ ಭಾಷಾ ಮತ್ತು ಗಣಿತ ಕೌಶಲಗಳನ್ನು ಅಭಿವೃದ್ಧಿಪಡಿಸಲು,ತರಗತಿ ಬೋಧನಾ ಕ್ರಮ ಉತ್ತಮಪಡಿಸುವ ಮೂಲಕ ಶಿಕ್ಷಕರ ಸಾಮರ್ಥ್ಯವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅನುಕೂಲವಾಗಿದೆ.
ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆ ಎಂಬ ಬೋಧನಾ ವಿಧಾನ ಒಳಗೊಂಡಿದೆ. ಮಕ್ಕಳ ಕಲಿಕಾ ಮಟ್ಟವನ್ನು ಸರಳ ಮೌಲ್ಯ ಮಾಪನದ ಮೂಲಕ ಗುರುತಿಸಿ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಮಕ್ಕಳ ಗುಂಪು ರಚಿಸಲಾಗುವುದು. ಪ್ರತಿ ಗುಂಪಿಗೂ ಸೂಕ್ತವಾದ ಕಲಿಕಾ ಸಾಮಗ್ರಿಗಳನ್ನು ಬಳಸಿ ಚಟುವಟಿಕೆ ಆಧರಿಸಿ ಕಲಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಗಣಿತ ಕೌಶಲಗಳು ವೃದ್ಧಿಯಾಗುತ್ತವೆ ಎಂದರು.
ನೋಡಲ್ ಅಧಿಕಾರಿ ಸಿ.ಎಸ್. ಲೀಲಾವತಿ ಮಾತನಾಡಿ, ಓದು ಕರ್ನಾಟಕದ ತರಬೇತಿ ಪಡೆದ ಸಿಆರ್‌ಪಿಗಳು ಕ್ಲಸ್ಟರ್ ವ್ಯಾಪ್ತಿಯ ಒಂದು ಶಾಲೆಯಲ್ಲಿ 4 ಮತ್ತು 5 ನೇ ತರಗತಿ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಗಣಿತ ಕೌಶಲಗಳನ್ನು ಸುಧಾರಿಸಲು 21 ದಿನಗಳ ಕಾಲ ಪ್ರಾಯೋಗಿಕವಾಗಿ ಅಭ್ಯಾಸ ತರಗತಿಗಳನ್ನು ನಡೆಸಬೇಕು ಎಂದರು.
ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಉಪನ್ಯಾಸಕರಾದ ಯು. ಸಿದ್ದೇಶಿ, ಎಸ್. ಬಸವರಾಜು, ಪದ್ಮಾ, ಸಂಪನ್ಮೂಲ ವ್ಯಕ್ತಿಗಳಾದ ಪರಶುರಾಮ್, ಕುಮಾರ್, ತಿಮ್ಮರಾಜು ಇತರರು ಇದ್ದರು.