ಜಿಲ್ಲೆ

ಬುಧವಾರದಿಂದ 11ರವರೆಗೆ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ

ಹಾಸನ: ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬುಧವಾರದಿಂದ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಆರಂಭವಾಗಿದೆ.

ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ, ಬೆಂಗಳೂರು ಸೌತ್ ಪ್ರೈಡ್, ಬೆಂಗಳೂರು ಲೇಕ್ ಸೈಡ್, ಇನ್ನರ್ ವೀಲ್ ಕ್ಲಬ್, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಇವರ ವತಿಯಿಂದ ಇಂದಿನಿಂದ ಏ.11 ರವರೆಗೆ ನಡೆಯಲಿರುವ ಉಚಿತ ಕೈ-ಕಾಲು ಜೋಡಣಾ ಶಿಬಿರವನ್ನು ರೋಟರಿ ಸದಸ್ಯರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಅಪಘಾತ, ಹಾಗೂ ಇನ್ನಿತರ ಕಾಯಿಲೆಗಳಿಂದ ಕೈ, ಕಾಲುಗಳನ್ನು ಕಳೆದುಕೊಂಡ ಹಲವರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಒಳಗಾಗುವ ಜತೆಗೆ ಅಲ್ಲೇ ಅಳತೆ ತೆಗೆದುಕೊಂಡು ತುರ್ತಾಗಿ ಇದ್ದ ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಸಂತಸಪಟ್ಟರು ಈ ವೇಳೆ ಅವರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವೇಳೆ ಮಾತನಾಡಿದ ರೋಟರಿ ಪದಾಧಿಕಾರಿಗಳು, ರೋಟರಿ ಸಂಸ್ಥೆ ಪ್ರತಿ ವರ್ಷ ಹಾಸನದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕೃತಕ ಕೈ ಕಾಲು ಜೋಡಣ ಶಿಬಿರ ಆಯೋಜಿಸಿಕೊಂಡು ಬಂದಿದೆ. ಇದಕ್ಕೆ ಹಾಸನ ಮಾತ್ರವಲ್ಲದೆ ಹೊರಗಿದ ಜಿಲ್ಲೆಗಳಿಂದ ಫಲಾನುಭವಿಗಳು ಆಗಮಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಈ ವರ್ಷವೂ ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಈ ಶಿಬಿರವನ್ನು ಪುನರ್ ಆಯೋಜಿಸಿದ್ದು ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಇಂದಿನಿಂದ ಜೋಡಣಾ ಶಿಬಿರ ಆರಂಭಿಸಲಾಗಿದೆ. ಏ.11 ರವರೆಗೆ ಶಿಬಿರ ನಡೆಯಲಿದ್ದು ಹೆಚ್ಚಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸುರೇಶ್, ಗಣೇಶ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಹರೀಶ್, ಮೋಹನ್ ದಾಸ್, ಸತ್ಯ ಸಂದ, ರವಿ ಕುಮಾರ್ ಇತರರು ಉಪಸ್ಥಿತರಿದ್ದರು.