ಪಾಂಡವಪುರ: ಕಾಲೇಜು ಹುಡುಗಿ ಚುಡಾಯಿಸುತ್ತಿದ್ದವನಿಗೆ ಬುದ್ಧಿವಾದ ಹೇಳಿದ ಅಂಗಡಿ ಮಾಲೀಕನ ಮೇಲೆ ಪುಂಡರ ಗುಂಪೊಂದು ಗುರುವಾರ ಹಲ್ಲೆ ನಡೆಸಿ, ಅಂಗಡಿಯನ್ನು ಧ್ವಂಸ ಮಾಡಿದೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನರಲ್ ಸ್ಟೋರ್ ನಡೆಸುತ್ತಿರುವ ಬಿ.ಜಿ.ಚಂದ್ರಶೇಖರ್ ಹಲ್ಲೆಗೊಳಗಾದವರು. ಈ ಸಂಬಂಧ ಆರೋಪಿಗಳಾದ ತಾಲೂಕಿನ ಹಿರೇಮರಳಿ ಗ್ರಾಮದ ರಕ್ಷಿತ್, ಅವಿ, ವಿನಯ್ ಸೇರಿದಂತೆ ಎಂಟು ಯುವಕರ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದ್ರಶೇಖರ್ ಅವರ ಅಂಗಡಿಯಲ್ಲಿ ಪದಾರ್ಥ ಖರೀದಿಸುತ್ತಿದ್ದ ಯುವತಿಯನ್ನು ರಕ್ಷಿತ್ ಎಂಬಾತ ಚುಡಾಯಿಸಿದ್ದಾನೆ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕ ಆಕ್ಷೇಪ ವ್ಯಕ್ತಪಡಿಸಿ, ಬೈದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ರಕ್ಷಿತ್ ಹಿರೇಮರಳ್ಳಿ ಗ್ರಾಮಕ್ಕೆ ತೆರಳಿ ಏಳು ಜನ ಸ್ನೇಹಿತರೊಂದಿಗೆ ಬಂದು, ಅಂಗಡಿ ಮಾಲೀಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾಟಲ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದರಲ್ಲದೇ, ಅಂಗಡಿಯನ್ನು ಧ್ವಂಸ ಮಾಡಿ, 46 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಪ್ರಜ್ಞೆತಪ್ಪಿದ ಅಂಗಡಿ ಮಾಲೀಕನನ್ನು ಅಕ್ಕಪಕ್ಕದ ಅಂಗಡಿ ಮಾಲೀಕರು ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಆಗಿರುವ ನಷ್ಟವನ್ನು ಭರಿಸಿಕೊಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.