Oplus_16908288 
ಜಿಲ್ಲೆ

ಬುದ್ಧಿವಂತಿಕೆ ಸೂಚಿಸುವ ದೈವ

ಹರಪನಹಳ್ಳಿ: ಗಣೇಶೋತ್ಸವವನ್ನು ಅಖಂಡ ಭಾರತ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಿದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಣಗಾರಪೇಟೆಯಲ್ಲಿ ಗಜಾನನ ಉತ್ಸವ ಮಂಡಳಿಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶನಿವಾರ ಮಾತನಾಡಿದರು. ಅಪಾರ ಭಕ್ತಿ, ಏಕತೆಯಿಂದ ದೇಶದಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಇದರಿಂದಾಗಿ ಭೌತಿಕ ಮತ್ತು ಆಧ್ಯಾತ್ಮಿಕ ಅಡೆತಡೆಗಳನ್ನು ನಿವಾರಿಸಿ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತಿದೆ. ಗಣೇಶ ಸೃಜನಶೀಲ, ಶಕ್ತಿ ಮತ್ತು ಬುದ್ಧಿವಂತಿಕೆ ಸೂಚಿಸುವ ದೈವವಾಗಿದ್ದಾನೆ ಎಂದರು.

ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದೇಶಾನಂದ ಸ್ವಾಮೀಜಿ ಮಾತನಾಡಿ. ಗಣೇಶ ಹಬ್ಬ ಆಚರಣೆ ಮೂಲಕ ನಮ್ಮ ಜೀವನದಲ್ಲಿ ಒಂಬತ್ತು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ಮಾತನಾಡಬೇಕು ಹಾಗೂ ಹೆಚ್ಚು ಕೇಳಿಸಿಕೊಳ್ಳುವುದರನ್ನು ನಾವು ರೂಢಿಸಿಕೊಳ್ಳಬೇಕು. ಚಿಕ್ಕ ಆಲೋಚನೆಗಳನ್ನು ಬಿಟ್ಟು ದೊಡ್ಡ ಕನಸಿನೊಂದಿಗೆ ನಿಶ್ಚಲವಾದ ಗುರಿ ಹೊಂದಬೇಕು. ಜೀವನದ ಒಳಿತಿಗಾಗಿ ಸಣ್ಣ ವಿಚಾರಗಳನ್ನು ತ್ಯಾಗ ಮಾಡಬೇಕು. ಎಂತಹ ಸಂದಿಗ್ಧ ಪರಿಸ್ಥಿತಿಗಳನ್ನೂ ಅಪಾರ ಅನುಭವದೊಂದಿಗೆ ಜೀರ್ಣಿಸಿ ಕೊಳ್ಳಬೇಕು. ದಾನ ಮತ್ತು ದಯೆ ಪಾಲಿಸಬೇಕು. ಗುರಿಗಳ ಮೇಲೆ ಕೇಂದ್ರೀಕೃತರಾಗಬೇಕು. ಬಡವರು ಅಥವಾ ಕೈಲಾಗದವರು ಎನ್ನುವ ಕೀಳರಿಮೆ ಮರೆತು ಶ್ರೇಷ್ಠವಾದುದನ್ನು ಸಾಧಿಸುವ ಮನಸ್ಸನ್ನು ಹೊಂದಬೇಕು ಎಂದರು.

ಪ್ರಾಚಾರ್ಯ ಅರುಣ್ ಕುಮಾರ್, ಪ್ರಾಧ್ಯಾಪಕ ವೀರನಗೌಡ ಇತರರಿದ್ದರು.