ಬೆಂಗಳೂರು ಗ್ರಾಮಾಂತರ: ನೀಲಗಿರಿ ತೋಪಿನಲ್ಲಿ ಮದ್ಯಪಾನ ಮಾಡಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಪುಂಡರಿಗೆ ಬೈದು ಬುದ್ಧಿ ಹೇಳಿದ್ದಕ್ಕೆ ಲಕೊಡುವ ದ್ರಾಕ್ಷಿ ಬೆಳೆಯನ್ನೇ ನಾಶಪಡಿಸಿರುವ ಪ್ರಕರಣ ದೇವನಹಳ್ಳಿ ತಾಲೂಕು ರಂಗನಾಥಪುರದಲ್ಲಿ ಬೆಳಕಿಗೆ ಬಂದಿದೆ.
ರೈತ ಕೆಂಪೇಗೌಡ ಅವರ ದ್ರಾಕ್ಷಿ ತೋಟದಲ್ಲಿ ಸುಮಾರು 200 ದ್ರಾಕ್ಷಿ ಸಸಿಗಳನ್ನು ಭಾನುವಾರ ರಾತ್ರಿ ನಾಶಪಡಿಸಲಾಗಿದೆ. ಅಕಾಲಿಕ ಮಳೆಯಿಂದ ನಿರೀಕ್ಷಿತ ಸಲಿಲ್ಲದೆ ಕಂಗಾಲಾಗಿದ್ದ ರೈತನಿಗೆ ದುಷ್ಕರ್ಮಿಗಳ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಮಾಜದ ಶಾಂತಿಕದಡುವ ವ್ಯಕ್ತಿಗಳಿಗೆ ಬುದ್ಧಿ ಹೇಳಿದ್ದಕ್ಕೆ ಇಂಥ ನೋವು ಎದುರಿಸಬೇಕಾಗಿದೆ ಎಂಬ ಬೇಸರ ಕೇಳಿಬರುತ್ತಿದೆ. ಪ್ರಕರಣ ಸಂಬಂಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ: ರೈತ ಕೆಂಪೇಗೌಡ ಅವರು ಪಿ.ರಂಗನಾಥಪುರದಲ್ಲಿ 3 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇವರ ಜಮೀನಿನ ಪಕ್ಕದಲ್ಲೆ ನೀಲಗಿರಿ ತೋಪು ಇದ್ದು, ಈ ಭಾಗದಲ್ಲಿ ಪ್ರತಿನಿತ್ಯ ಪುಂಡರು, ಕುಡುಕರು ಜಮಾವಣೆಯಾಗಿ ಮೋಜು ಮಸ್ತಿ ಮಾಡುತ್ತಿದ್ದರು. ಮದ್ಯದ ಅಮಲಿನಲ್ಲಿ ದಾರಿಯಲ್ಲಿ ಹೋಗುವ ಮಹಿಳೆಯರನ್ನು ಚುಡಾಯಿಸುವುದು ಕೇಳಲು ಬಂದವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ. ಇತ್ತೀಚೆಗೆ ನೀಲಗಿರಿ ತೋಪಿನಲ್ಲಿ ಪುಂಡರ ಗುಂಪೊಂದು ಮದ್ಯಸೇವಿಸಿ ಅಲ್ಲಿಯೇ ಗಲಾಟೆ ಮಾಡುತ್ತಿತ್ತು. ಇದನ್ನು ಗಮನಿಸಿದ ಕೆಂಪೇಗೌಡ, ಅವರನ್ನು ಗದರಿಸಿದ್ದರು. ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಸ್ಥಳದಿಂದ ಅವರನ್ನು ಖಾಲಿ ಮಾಡಿಸಿದ್ದರು. ಇದೇ ದ್ವೇಷಕ್ಕೆ ದ್ರಾಕ್ಷಿ ಗಿಡ ನಾಶಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು 200 ಗಿಡಗಳನ್ನು ಮಚ್ಚಿನಿಂದ ಕತ್ತರಿಸಿರುವ ಗುರುತು ಕಂಡುಬರುತ್ತಿದ್ದು ಸೇಡಿನ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂಥ ಪ್ರಕರಣಗಳು ಪೊಲೀಸ್ ಇಲಾಖೆಗೆ ಸಂಬಂಧಪಡುತ್ತವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬೆಳೆ ನಾಶವಾದರೆ ಪರಿಹಾರ ಸಿಗುತ್ತದೆ, ಈ ಪ್ರಕರಣದಲ್ಲಿ ಇದು ಕಷ್ಟಸಾಧ್ಯ. ಆದರೂ ಬೇರೆ ಯೋಜನೆಯಡಿ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಗುಣವಂತ, ಉಪನಿರ್ದೇಶಕತೋಟಗಾರಿಕೆ ಇಲಾಖೆ ಈ ಭಾಗದಲ್ಲಿ ನೀರು ಸಿಗುವುದೇ ಕಷ್ಟ 2 ಸಾವಿರ ಅಡಿ ಕೊರೆಸಿ ಸಿಕ್ಕ ಅತ್ಯಲ್ಪ ನೀರಿನಲ್ಲೇ ದ್ರಾಕ್ಷಿ ಬೆಳೆಯಲು ಬೆವರು ಸುರಿಸಿದ್ದೇನೆ. ಆದರೆ ಕಿಡಿಗೇಡಿಗಳು ದ್ವೇಷಸಾಧನೆಗೆ ದ್ರಾಕ್ಷಿಗಿಡಗಳನ್ನು ನಾಶಮಾಡಿದ್ದಾರೆ. ಸಾಲ ಮಾಡಿದ ಬೆಳೆ ಕಣ್ಣೆದುರೆ ಹಾಳಾಗಿರುವುದು ಅತೀವ ನೋವು ತಂದಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು. ಕೆಂಪೇಗೌಡ, ದ್ರಾಕ್ಷಿ ಬೆಳೆಗಾರ