ಜಿಲ್ಲೆ

ಬುದ್ಧ, ಅಂಬೇಡ್ಕರ್ ಮಾರ್ಗದಲ್ಲಿ ಸಾಗೋಣ

ಮೈಸೂರು: ಬುದ್ಧ ಬೆಳಕು. ಭಾರತದಲ್ಲಿ ಹುಟ್ಟಿದ ಈ ಬೆಳಕು ಇಂದು ಜಗತ್ತಿಗೆ ಬೇಕಾಗಿದೆ. ಅದುವೇ ಎಲ್ಲೆಡೆ ಬೆಳಗುತ್ತಿದೆ. ಅಶಾಂತಿ, ಹಿಂಸೆಯ ನಿರ್ಮೂಲನೆಗೆ ಬುದ್ಧ ವಿಚಾರಗಳು ಅಗತ್ಯವಾಗಿದೆ ಎಂದು ಲಾವೋಸ್ ಬುದ್ಧವಿಹಾರದ ಪೂಜ್ಯ ರಾಂಡಿಸೋಟ್ ಹೇಳಿದರು

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನದ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದರು

ಪಂಚಶೀಲಗಳ ಒಪ್ಪಿಕೊಂಡು ಸಾಗುವುದು ಕಷ್ಟಕರ. ಆದರೆ 6ನೇ ಪಂಚಶೀಲವಾದ ಜಾಗೃತಿಯಿಂದ ಮಾತ್ರ ಐದು ಪಂಚಶೀಲಗಳ ಪಾಲನೆ ಸುಲಭಗೊಳಿಸಬಹುದು. ಇದರಿಂದ ನೋವು, ದುಃಖ ನಿವಾರಿಸಿ, ಶಾಂತಿ ಸೃಷ್ಟಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬುದ್ಧನ ಸಂದೇಶವಾಗಿರುವ ಮುಕ್ತ ಮನಸ್ಸು, ಶುದ್ಧ ಮನಸ್ಸು ಸದಾ ಜ್ಞಾನ ಕಡೆ ಮಿಡಿಯುತ್ತದೆ. ಇದು ಉತ್ತಮ ಜಗತ್ತಿನ ನಿರ್ಮಾಣಕ್ಕೆ ಸಹಕಾರಿ ಎಂದರು.

ಮಯನ್ಮಾರ್‌ನ ಸಾಸನ ವಿಪುಲಾಮ ಬುದ್ಧ ತರಬೇತಿ ಕೇಂದ್ರದ ಪನಿಂದ ಸಯಡೋ ಮಾತನಾಡಿ, ಸಿದ್ಧಾರ್ಥ ಎಂಬ ವ್ಯಕ್ತಿ ಬುದ್ಧನಾಗಲು ಸಾಧ್ಯವಾಗಿದ್ದು ಜ್ಞಾನದಿಂದ. ಈ ಜ್ಞಾನವೇ ಇದೀಗ ಜಗತ್ತಿಗೆ ಬೇಕು. ಜ್ಞಾನಾರ್ಜನೆಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಕನ್ನಡದಲ್ಲೇ ಮಾತನಾಡಿದ ಬೈಲುಕುಪ್ಪೆಯ ಕರ್ಮ ರಾನ್ರಿಯನ್ ಪುಂಚೆ ಅವರು, ಸತ್ಯ, ಅಹಿಂಸೆ, ಕರುಣೆ, ಪ್ರೀತಿ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು. ಇದರೊಂದಿಗೆ ಶಾಂತ, ಸಮೃದ್ಧ ಸಮಾಜ ಕಟ್ಟಬಹುದು ಎಂದರು.

ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಭಂತೆ ಮನೋರಕ್ಖಿತ ಮಾತನಾಡಿ, ಬುದ್ಧ-ಅಂಬೇಡ್ಕರ್ ಒಂದು ಪ್ರಜ್ಞೆ. ನಾವುಗಳು ಈ ಪ್ರಜ್ಞೆಯ ಕಡೆಗೆ ಸಾಗಬೇಕು. ಅಂಬೇಡ್ಕರ್ ವ್ಯಕ್ತಿಯಲ್ಲ; ಅದು ಒಂದು ಶಕ್ತಿ. ಜನಸಮೂಹದ ಪಾಲಿಗೆ ದೊಡ್ಡ ಚೈತನ್ಯ ರೂಪಕ ಎಂದರು.

ಬೌದ್ಧ ಧಮ್ಮ ಎಲ್ಲ ಧರ್ಮದೊಂದಿಗೆ ಬದುಕುವ ಜೀವನ ಕ್ರಮ. ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮೀಯರೊಂದಿಗೆ ಸೇರಿಕೊಂಡು ಉತ್ತಮ ಕೆಲಸದೊಂದಿಗೆ ಪ್ರಬುದ್ಧ ಸಮಾಜ ನಿರ್ಮಾಣ ಮಾಡೋಣ. ದೇಶದ ಸಂವಿಧಾನ ರಕ್ಷಣೆ ನಮ್ಮೆಲ್ಲ ಆದ್ಯತೆಯಾಗಬೇಕು. ಇಲ್ಲವಾದರೆ ಸಮಾನತೆ ನಶಿಸಲಿದೆ ಎಂದು ಎಚ್ಚರಿಸಿದರು.

ತಿ.ನರಸೀಪುರದ ನಳಂದ ಬುದ್ಧವಿಹಾರದ ಭಂತೆ ಬೋಧಿರತ್ನ ಮಾತನಾಡಿ, ಬಾಬಾಸಾಹೇಬರ ಪ್ರಬುದ್ಧ ಭಾರತದ ಕನಸು ನನಸು ಮಾಡಬೇಕಾಗಿದೆ. ಅವರ ಆಶಯಗಳಾದ ಸಾಮಾಜಿಕ ನ್ಯಾಯ, ಸಮಪಾಲು, ಸಮಾನತೆ, ಕರುಣೆ, ಮೈತ್ರಿ ಹಿಂದಿಗಿಂತಲೂ ಈಗ ಅಗತ್ಯವಾಗಿದೆ. ಆದ್ದರಿಂದ ಅಂಬೇಡ್ಕರ್, ಬುದ್ಧನ ದಾರಿಯಲ್ಲಿ ನಾವುಗಳೆಲ್ಲ ಸಾಗಬೇಕಾಗಿದೆ ಎಂದರು.

ಕಲಬುರಗಿಯ ಬುದ್ಧವಿಹಾರದ ಭಂತೆ ವರಜ್ಯೋತಿ ಮಾತನಾಡಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದಿರುವುದು ಖಂಡನೀಯ. ಇಂತಹ ದುಷ್ಕೃತ್ಯದ ವಿರುದ್ಧ ಹೋರಾಡಲು ನಾವುಗಳೆಲ್ಲ ಒಂದಾಗಬೇಕು. ಶಾಂತಿಯ ಸೈನಿಕರಾಗಬೇಕು. ಸೌಹಾರ್ದತೆ, ತಾಳ್ಮೆಯಿಂದ ದೇಶ ಕಟ್ಟೋಣ. ಜಾತಿ ವಿನಾಶಕ್ಕೂ ಸಂಘಟಿತರಾಗಬೇಕು ಎಂದು ಕರೆಕೊಟ್ಟರು.

ಅರುಣಾಚಲಪ್ರದೇಶದ ಭಂತೆ ವಿಸುದ್ದಶೀಲ, ಮೈಸೂರಿನ ಭಂತೆ ಕಲ್ಯಾಣಸಿರಿ, ತಿ.ನರಸೀಪುರದ ಬೋಧಿರತ್ನ, ಸುಗತಪಾಲ, ಅಂತರಸಂತೆಯ ಮಾತೆ ಗೌತಮಿ, ಕರಬುರಗಿಯ ಭಂತೆ ಅಮರಜ್ಯೋತಿ, ಬೆಂಗಳೂರಿನ ಭಂತೆ ಜ್ಞಾನಲೋಕ, ಬೀದರಿನ ಭಂತೆ ಸುಮನಾ ಅಮ್ಮ, ದಾವಣಗೆರೆಯ ಭಂತೆ ವಿಶುದ್ಧ, ಬೆಂಗಳೂರಿನ ಬದ್ಧದತ್ತ, ತುಮಕೂರಿನ ಭಂತೆ ಜ್ಞಾನಾನಂದ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಧಮ್ಮಾಚಾರಿಗಳು, ಉಪಾಸಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.