ಮೈಸೂರು: ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಬಿಜೆಪಿ, ಜೆಡಿಎಸ್ ಈಗ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದರು.
ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಚುನಾವಣೆ ಭರವಸೆಗಳನ್ನು ಈಗಲೇ ಈಡೇರಿಸಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಿಗೆ ರಾಜಕೀಯ ಪ್ರಜ್ಞೆ ಇಲ್ಲ. ಚುನಾವಣಾ ವರ್ಷದಲ್ಲಿ ಮಂಡಿಸಿದ ಬಜೆಟ್ ಅವಧಿ 3 ತಿಂಗಳು ಮಾತ್ರ. ಬಜೆಟ್ ಮಂಡಿಸದೇ ಕಾರ್ಯಕ್ರಮಗಳಿಗೆ ಹಣ ಕೊಡಲು ಸಾಧ್ಯವಿಲ್ಲ. ಸರ್ಕಾರ ಹಣ ಕೊಡಲು ಏನು ಮಾಡಬೇಕೆಂದು ತಿಳಿಯದೇ ಪೆದ್ದರಂತೆ ವರ್ತಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
2014ರಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದ ಮೋದಿ, ಯಾಕೆ ಸುಮ್ಮನಿದ್ದಾರೆ. ರೈತರ ಆದಾಯ ದ್ವಿಗುಣ ಮಾಡಿದರೆ? ಅವರು ನೀಡಿದ ಭರವಸೆಗಳನ್ನು ಈಡೇರಿಸದೇ ತಮ್ಮ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟಲು ಹಸಿಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದರು. ಆಡಳಿತ ವಿರೋಧಿ ಧೋರಣೆಯಿಂದ ಜನರು ಮುಖಕ್ಕೆ ಮಸಿ ಬಳಿದಿದ್ದಾರೆ. ಆ ಮಸಿಯನ್ನು ಒರೆಸಿಕೊಂಡು ಈಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.
5 ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಔಪಚಾರಿಕ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಗುರುವಾರ ಅಜೆಂಡಾದ ಮೇಲೆ ಸಂಪುಟ ಸಭೆ ಕರೆದಿದ್ದು, ಸಭೆಯ ಬಳಿಕ ಎಲ್ಲ ತೀರ್ಮಾನವಾಗಲಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಇಲ್ಲದಿದ್ದಾಗ ಎಲ್ಲರಿಗೂ ಸಮಾನ ಅವಕಾಶ ನೀಡಿ ಮೀಸಲಾತಿ ಜಾರಿಗೆ ತಂದರು. ಆ ಮೂಲಕ ಭಾರತದ ಪ್ರಜಾಪ್ರಭುತ್ವದ ಆಡಳಿತಕ್ಕೆ ಮುನ್ನುಡಿ ಬರೆದರು. ಬಸವಣ್ಣ ಪ್ರಜಾಪ್ರಭುತ್ವದ ವ್ಯವಸ್ಥೆ ರೂಪಿಸಿದರು. ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ. ತದನಂತರ ಸ್ವತಂತ್ರ ಭಾರತದಲ್ಲಿ ದೇವರಾಜ ಅರಸು, ತುಳಸಿದಾಸಪ್ಪ, ಬಿ.ರಾಚಯ್ಯ, ಸಾಹುಕಾರ್ ಚೆನ್ನಯ್ಯ ಉತ್ತಮ ಮಾರ್ಗ ತೋರಿದರು. ಈಗ ಸಿದ್ದರಾಮಯ್ಯ ಅವರ ಹಿಂದೆ ನಾವೆಲ್ಲ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಯಾರೋಬ್ಬರ ಆಸ್ತಿಯಲ್ಲ. ಅದೊಂದು ಚಳವಳಿ. ಈ ಚುನಾವಣೆಯಲ್ಲಿ ಭಾರತ್ ಜೋಡೋ ಯಾತ್ರೆ, ಮೇಕೆದಾಟು ಯೋಜನೆ ಬಿಜೆಪಿ ವಿರುದ್ಧದ ಜನಾಕ್ರೋಶ ಕಾಂಗ್ರೆಸ್‌ಗೆ 135 ಸ್ಥಾನ ಬರುವಂತೆ ಮಾಡಿದೆ. ಇದರಲ್ಲಿ ನಮ್ಮ ಕಾರ್ಯಕರ್ತರ ಪರಿಶ್ರಮವೂ ಇದ್ದು, ಅದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅರುಣ್‌ಸಿಂಗ್ ಸುರ್ಜೇವಾಲಾ ಅವರು ಮೈಸೂರು ನಗರದಲ್ಲಿ ಮುಂದಿನ 2 ವರ್ಷಗಳಲ್ಲಿ ಸುಸಜ್ಜಿತ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಬೇಕೆಂದು ಗುರಿ ಕೊಟ್ಟಿದ್ದಾರೆ. ಇದನ್ನು ಈಡೇರಿಸಲು ಜಿಲ್ಲಾ ಮಂತ್ರಿಗಳಾದ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಸಹಕಾರ ನೀಡಬೇಕು ಎಂದು ಕೋರಿದರು.
ಶಾಸಕ ಕೆ.ಹರೀಶ್ ಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ, ಎಂ.ಶಿವಣ್ಣ, ಮಂಜುನಾಥ್, ಶಿವಮಲ್ಲು, ಎಚ್.ಎ.ವೆಂಕಟೇಶ್, ಪುಷ್ಪಲತಾ ಚಿಕ್ಕಣ್ಣ, ಈಶ್ವರ್ ಚಕ್ಕಡಿ ಇತರರು ಇದ್ದರು.