ಜಿಲ್ಲೆ

ಬುಡಾ ಸಹವಾಸವೇ ಬೇಡ!

ಧರ್ಮರಾಜ ರಾಮನಗೌಡ ಪಾಟೀಲ

ರವಿ ಗೋಸಾವಿ, ಬೆಳಗಾವಿ: ಬುಡಾ ಸೇರಿ ಸೌಲಭ್ಯ ಪಡೆಯಬೇಕೆನ್ನುವ ಇಂದಿನ ದಿನಗಳಲ್ಲಿ ಬಸವನಕುಡಚಿಯ ಗ್ರಾಮಸ್ಥರು ‘ಬುಡಾ ಸಹವಾಸವೇ ಬೇಡ, ನಮ್ಮನ್ನು ಗ್ರಾಮ ಪಂಚಾಯಿತಿಗೆ ಸೇರಲು ಬಿಟ್ಟುಬಿಡಿ’ ಎನ್ನುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆಯೇ ಬುಡಾ ಸೇರಿದ ನಮಗೆ ಇಲ್ಲಿಯವರೆಗೆ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸದೆ ನರಕದರ್ಶನ ಮಾಡಿಸಿದೆ ಎಂದು ಬುಡಾ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಅಭಿವೃದ್ಧಿಪಡಿಸಲೆಂದು ನಗರದ ಸುತ್ತಲಿನ 28 ಗ್ರಾಮಗಳನ್ನು ಬುಡಾ ವ್ಯಾಪ್ತಿಗೊಳಪಡಿಸಲು ಚರ್ಚೆ ನಡೆದಿರುವ ಸಂದರ್ಭದಲ್ಲಿ ಇಂತಹದೊಂದು ಒತ್ತಾಯ ಕೇಳಿ ಬರುತ್ತಿದೆ. ನಗರದಿಂದ ಕೇವಲ 3-4 ಕಿಮೀ ದೂರದಲ್ಲಿರುವ ಬಸವನ ಕುಡಚಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕುಗ್ರಾಮದಂತಾಗಿದೆ. ಸಕಲ ಸೌಕರ್ಯಗಳನ್ನು ಕಲ್ಪಿಸಿ ಮೇಲ್ದರ್ಜೆಗೇರಿಸಬೇಕಿದ್ದ ಬುಡಾ ಕೇವಲ ತೆರಿಗೆ ಸಂಗ್ರಹಕ್ಕಷ್ಟೇ ಬಸವನ ಕುಡಚಿ ಗ್ರಾಮವನ್ನು ಬಳಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

5 ಸಾವಿರ ಮನೆಗಳಿರುವ ಗ್ರಾಮದಲ್ಲಿ 15 ಸಾವಿರಕ್ಕೂ ಅಧಿಕ ಜನರಿದ್ದಾರೆ. ಸಮರ್ಪಕ ರಸ್ತೆ, ಆರೋಗ್ಯ ಸೇವೆ, ಬೀದಿದೀಪ ಹಾಗೂ ಗಟಾರು ವ್ಯವಸ್ಥೆ ಇಲ್ಲದೆ ದಿನವೂ ಕಷ್ಟಪಡುತ್ತಿವೆ. ಸಮಸ್ಯೆಗಳ ಬಗ್ಗೆ ಸಾವಿರಾರು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಗಾಂಧಿಗಲ್ಲಿ ನಿವಾಸಿ ಮಲ್ಲಪ್ಪ ಬೋಗಾರ ಪ್ರತಿಕ್ರಿಯಿಸಿ ಗಟಾರು ವ್ಯವಸ್ಥೆ ಇಲ್ಲದ್ದರಿಂದ ಮನೆ ಮುಂದೆ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದ್ದು, ಸೊಳ್ಳೆಗಳ ಕಾಟ ಮಿತಿಮೀರಿದೆ. ಸೊಳ್ಳೆ ಕಡಿತದಿಂದಾಗಿ ಆಗಾಗ ಡೆಂಘೆ, ಮಲೇರಿಯಾ ರೋಗದಿಂದ ಬಳಲುತ್ತಿದ್ದೇವೆ ಎಂದರು. ಕೃಷಿಯನ್ನೇ ನೆಚ್ಚಿಕೊಂಡಿರುವ ಬಸವನ ಕುಡಿಚಿಯಲ್ಲಿ ಜಮಿನುಗಳಿಗೆ ತೆರಳಲು ಸಮರ್ಪಕ ರಸ್ತೆಗಳಿಲ್ಲ. ಊರಿನ ಸುತ್ತಲೂ ಇದ್ದ ಗಾಯರಾಣಾ ಜಮೀನಿನಲ್ಲಿ ಬಡಾವಣೆ ತಲೆ ಎತ್ತಿದ್ದರಿಂದ ಜಾನುವಾರುಗಳನ್ನು ಮೇಯಿಸಲು ಜಾಗವೇ ಇಲ್ಲದಂತಾಗಿದೆ. ಗ್ರಾಮದ ಗ್ರಂಥಾಲಯ ಶಿಥಿಲಾವಸ್ಥೆಯಲ್ಲಿದ್ದು, ಹೆಂಚುಗಳು ಒಡೆದಿವೆ. ಕೋರೆ ಹುಳುಗಳ ಕಾಟದಿಂದ ವಿದ್ಯಾರ್ಥಿಗಳು ಹೋಗದಂಗಾಗಿದೆ.

ಹಲವೆಡೆ ರಾತ್ರಿ ಬೀದಿದೀಪಗಳು ಉರಿಯುವುದೇ ಇಲ್ಲ. ಸ್ಥಳೀಯರೇ ವ್ಯವಸ್ಥೆ ಮಾಡಿಕೊಂಡರೆ ಮುತಗಾ ಗ್ರಾಪಂನವರು ಬಂದು ಸಂಪರ್ಕ ಕತ್ತರಿಸುತ್ತಾರೆ. ಅಲ್ಲದೆ ತೆರಿಗೆ ಬುಡಾಗೆ ಪಾವತಿಸುತ್ತೀರಿ, ಬೀದಿ ದೀಪದ ಹೊರೆ ಗ್ರಾಮ ಪಂಚಾಯಿತಿಗೇಕೆ? ಎಂದು ಆಕ್ಷೇಪಿಸುತ್ತಾರೆ. ಹೀಗಾಗಿ, ರಾತ್ರಿ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹೀಗೆ ದಿನಕ್ಕೊಂದು ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಗ್ರಾಮಸ್ಥರು ವಿಜಯವಾಣಿ ಪತ್ರಿಕೆ ಎದುರು ಪರಿಸ್ಥಿತಿ ಹೇಳಿಕೊಂಡಿದ್ದಾರೆ.

ಜೀವಜಲಕ್ಕೂ ತಾತ್ವಾರ!: 24/7 ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು 20 ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ನೀರು 15 ದಿನಕ್ಕೊಮ್ಮೆ ಬರುತ್ತದೆ. ಕೆಲವೊಮ್ಮೆ ಮೂರು ವಾರಗಟ್ಟಲೆ ಕುಡಿಯುವ ನೀರು ಸಂಗ್ರಹಿಸಿಟ್ಟುಕೊಳ್ಳುವ ಪರಿಸ್ಥಿತಿ ಬರುತ್ತಿದೆ. ಅದೇ ನೀರನ್ನೇ ಕಾಯಿಸಿ, ಸೋಸಿ ಕುಡಿಯುತ್ತೇವೆ ಎಂದು ಗೃಹಿಣಿ ಶೋಭಾ ಪಾಟೀಲ ಹೇಳಿದರು.

ಪಟ್ಟಿ ಹಾಕಿ ರಸ್ತೆ ನಿರ್ಮಾಣ!: 1983ರಲ್ಲೇ ಬುಡಾಗೆ ಸೇರಿದ್ದರೂ ಇಂದಿಗೂ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ಬಸವನ ಕಾಲನಿಯ ನಿವಾಸಿಗಳೇ ಪಟ್ಟಿ ಹಾಕಿ 1.50 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ ಏಳು ಅಡ್ಡಮಾರ್ಗಗಳಲ್ಲಿ ಸಮಪರ್ಕ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಮರಂ ಹಾಕಿ ಗಟ್ಟಿಗೊಳಿಸಿದ ಬಳಿ ಆಗಿನ ಶಾಸಕ ಅನಿಲ ಬೆನಕೆ ರಸ್ತೆಗಳಿಗೆ ಡಾಂಬಕರೀಣ ಮಾಡಿಸಿದ್ದೇವೆ ಎನ್ನುತ್ತಾರೆ ಎಂದು ಬಸವನ ಕಾಲನಿ ನಿವಾಸಿಗಳ ಸಂಘದ ಅಧ್ಯಕ್ಷ ಸಂಜೀವ ಅರಗಂಜಿ ಹೇಳಿದರು.