ಗುಂಡ್ಲುಪೇಟೆ: ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಮದ್ದೂರು ಆದಿವಾಸಿಗಳ ಕಾನಿಯಲ್ಲಿ ಶುಕ್ರವಾರ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಮೂಲ ಸೌಕರ್ಯ ಒದಗಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂದರ್ಭ ತಮ್ಮನ್ನು ಭೇಟಿ ಮಾಡಿದ ಗ್ರಾಮಸ್ಥರೊಂದಿಗೆ ಮಾತನಾಡಿದರು.
ಬುಡಕಟ್ಟು ಹಾಗೂ ಆದಿವಾಸಿ ಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಆರೋಗ್ಯ ರಕ್ಷಣೆಗಾಗಿ ಮೊಟ್ಟೆ, ತುಪ್ಪದಂತಹ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಹಣದಾಸೆಗೆ ಇವುಗಳನ್ನು ಮಾರಿಕೊಳ್ಳದೆ ಎಲ್ಲವನ್ನೂ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲನಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ. ಅಕ್ರಮ-ಸಕ್ರಮ ಯೋಜನೆಯಡಿ 68 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನೂ ಅಗತ್ಯವಿದ್ದವರು ಅರ್ಜಿ ಸಲ್ಲಿಸಿದರೆ ಅರ್ಹರಿಗೆ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ವಾಸಿಸಲು ಮನೆಯಿಲ್ಲ. ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇವುಗಳನ್ನು ಕೊಡಿಸಿ ಎಂದು ಸ್ಥಳೀಯರು ಮನವಿ ಮಾಡಿದರು. ಕಾಡುಕುರುಬ ಹಾಗೂ ಜೇನುಕುರುಬ ಜನಾಂಗದವರಿಗೆ ಮನೆ ನಿರ್ಮಿಸಲಾಗುತ್ತಿದೆ. ಸದ್ಯ ಸರ್ಕಾರ ಸೋಲಿಗರಿಗೆ ಮನೆ ನಿರ್ಮಿಸಲು ಅನುದಾನ ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮನೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಬೇರಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ, ಲೋಕೋಪಯೋಗಿ ಇಲಾಖೆ ಎಇಇ ಸಿದ್ದಪ್ಪ, ಮುಖಂಡರಾದ ಎಲ್.ಸುರೇಶ್, ಸುರೇಂದ್ರ, ಚನ್ನಮಲ್ಲೀಪುರ ಬಸವಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಚಾಮುಲ್ ಮಾಜಿ ನಿರ್ದೇಶಕ ಕಣ್ಣೇಗಾಲ ಸ್ವಾಮಿ, ರಾಜೇಂದ್ರ ಹಲವರು ಇದ್ದರು.