ಜಿಲ್ಲೆ

ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣ: ವ್ಯಾಪಕ ಮೆಚ್ಚುಗೆ

ಹಾಸನ: ಇಡೀ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪೊಲೀಸ್ ಇಲಾಖೆ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದ ವಿದ್ಯಾರ್ಥಿನಿಯಿಂದ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿಸಲಾಯಿತು. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿನಿ ಸಂಗೀತಾ ಎಂಬುವವರಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ ಹರಿರಾಮ್ ಶಂಕರ್ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಅಂಗಡಿಹಳ್ಳಿಯ ಬುಡಕಟ್ಟು ಅಕ್ಕಿಪಿಕ್ಕಿ ಅಲೆಮಾರಿ ಜನಾಂಗದ ವಿದ್ಯಾರ್ಥಿನಿ ಸಂಗೀತಾ ಎಂಬಾಕೆ ಈ ಸಮಾಜದಲ್ಲಿ ಎಸ್‌ಎಸ್‌ಎಲ್‌ಸಿ ಅತೀ ಹೆಚ್ಚು ಗಳಿಸಿದ್ದಾಳೆ. ಈಕೆಯ ಕೈಯಿಂದ ಧ್ವಜಾರೋಹಣ ಮಾಡಿಸುವ ಮೂಲಕ ಸ್ವಾತಂತ್ರೊೃೀತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.
ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಅಲೆಮಾರಿ ಕುಟುಂಬ, 186 ಸಿಳ್ಳೇಕ್ಯಾತ ಜನಾಂಗ, 156 ಈಡಿಗ ಕುಟುಂಬ ವಾಸ ಮಾಡುತ್ತಿದ್ದು, ಇವರಲ್ಲಿ ಹಕ್ಕಿಪಕ್ಕಿ ಜನಾಂಗದ ಹರೀರಾ ಮತ್ತು ಮಂಜುಳಾ ಎಂಬ ದಂಪತಿ ಪುತ್ರಿ ಸಂಗೀತಾ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.62 ರಷ್ಟು ಅಂಕ ಪಡೆದು ಉತ್ತೀರ್ಣರಾಗುವ ಮೂಲಕ ಈ ಬುಡಕಟ್ಟು ಸಮಾಜದಲ್ಲಿ ಅತ್ಯುತ್ತಮ ಉತ್ತಮ ಸಾಧನೆ ಮಾಡಿದ್ದಾಳೆ.
ಇದನ್ನು ಗುರುತಿಸಿದ ಜಿಲ್ಲಾ ಪೊಲೀಸ್ ಪೋಲಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಈ ಬಾರಿ ಸ್ವಾತಂತ್ರೃ ದಿನಾಚರಣೆ ಸಂದರ್ಭದಲ್ಲಿ ಸಂಗೀತಾ ಅವರಿಂದ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯುವತಿಯನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಅತ್ಯಂತ ಪ್ರೀತಿಯಿಂದ ಪೊಲೀಸ್ ಇಲಾಖೆ ಸ್ವಾಗತಿಸಿತು. ಇಡೀ ಜಿಲ್ಲೆ ಹಾಗೂ ರಾಜ್ಯದಲೇ ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ಸಮಾಜದ ಯುವತಿ ಸ್ವಾತಂತ್ರೊೃೀತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಉಳಿದವರಿಗೆ ಮಾದರಿಯಾಗಿದ್ದು ಉಳಿದ ವಿದ್ಯಾರ್ಥಿಗಳಿಗೂ ಕೂಡ ಪ್ರೇರಣೆಯಾಗಿದ್ದಾರೆ. ಈ ಕಾರ್ಯ ಮಾಡಿದಂತಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮತ್ತು ಇಲಾಖೆಗೆ ಮತ್ತಷ್ಟು ಗೌರವ ಹೆಚ್ಚಾಗಿದೆ.

ವಿದ್ಯಾರ್ಥಿನಿ ಸಂಗೀತಾ ಹಿನ್ನೆಲೆ
ಬೇಲೂರು ತಾಲೂಕು ಅಂಗಡಿಹಳ್ಳಿ ಗ್ರಾಮದ ಅಲೆಮಾರಿ ಹಕ್ಕಿ-ಪಿಕ್ಕಿ ಜನಾಂಗಕ್ಕೆ ಸೇರಿದ ಸಂಗೀತಾ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಿನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಹಗರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಇದೀಗ ಪಿಯುಸಿಯಲ್ಲಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡು ಹಗರೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ಹರೀರಾ ಮತ್ತು ಮಂಜುಳಾ ದಂಪತಿಗೆ ಆರು ಜನ ಮಕ್ಕಳಿದ್ದು ಅವರಲ್ಲಿ ಸಂಗೀತಾ ಐದನೇ ಹೆಣ್ಣುಮಗಳು. ಅಕ್ಕ- ತಂಗಿಯರು ಹಾಗೂ ಅಣ್ಣಂದಿರು ಕೂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಸಂಗೀತಾ ಒಬ್ಬರು ಮಾತ್ರ ಕಾಲೇಜು ಮೆಟ್ಟಿಲು ಹತ್ತಿದ್ದಾರೆ.

ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ
ನಮ್ಮದು ಅಲೆಮಾರಿ ಹಕ್ಕಿಪಿಕ್ಕಿ ಜನಾಂಗ. ಎಲ್ಲಾ ಸಮಾಜಗಳಿಂದ ನಿರ್ಲಕ್ಷೃಕ್ಕೆ ಒಳಗಾಗಿದ್ದು ನಮ್ಮನ್ನು ಮುಖ್ಯ ವಾಹಿನಿಗೆ ತರಲು ಸಾಕಷ್ಟು ಶ್ರಮ ವಹಿಸಲಾಗುತ್ತಿದೆ. ಆದರೆ ನಮ್ಮಂತಹ ಸಮಾಜದ ಹೆಣ್ಣು ಮಗುವನ್ನು ಗುರುತಿಸಿ ಪೊಲೀಸ್ ಇಲಾಖೆ ಸ್ವಾತಂತ್ರೊೃೀತ್ಸವದ ಧ್ವಜಾರೋಹಣಕ್ಕೆ ನನ್ನನ್ನ ಆಹ್ವಾನಿಸಿದ್ದು ಜೀವನದಲ್ಲಿ ಮರೆಯಲಾಗದ ಖುಷಿಯ ಕ್ಷಣ ಎಂದು ಸಂಗೀತಾ ತನ್ನ ಮನದಾಳದ ಮಾತನ್ನು ಹಂಚಿಕೊಂಡರು.
ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಸರ್ಕಾರಿ ನೌಕರಿ ಸೇರಬೇಕೆಂಬ ಅಚಲ ವಿಶ್ವಾಸದೊಂದಿಗೆ ಓದುತ್ತಿದ್ದೇನೆ. ನನಗೆ ಪೊಲೀಸರು ಈ ರೀತಿ ಅವಕಾಶ ಮಾಡಿಕೊಟ್ಟು ಪ್ರೀತಿಯಿಂದ ಮಾತನಾಡಿಸಿ ನನಗೆ ಹೆಚ್ಚಿನ ಆತ್ಮಸ್ಥೈರ್ಯ ತುಂಬಿದ್ದಾರೆ. ನಾನು ಏನಾದರೂ ಕೆಲಸಕ್ಕೆ ಸೇರಬೇಕೆಂದರೆ ಅದು ಪೊಲೀಸ್ ಇಲಾಖೆಯೇ ಆಗಿರಬೇಕು ಎಂಬ ನಿರ್ಧಾರ ಮಾಡಿದ್ದೇನೆ. ಆ ಹಿನ್ನೆಲೆಯಲ್ಲಿ ಇಂದಿನಿಂದಲೇ ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮುಂದುವರಿಸುತ್ತೇನೆ. ನನಗೆ ಸಹಕಾರ ನೀಡಿ ನನ್ನ ಸಮಾಜವನ್ನು ಗುರುತಿಸಿದ ಪೊಲೀಸ್ ಇಲಾಖೆ ಮತ್ತು ಮುಖ್ಯಸ್ಥರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದು ಹೇಳಿದರು.

ಎಸ್‌ಪಿ ನಿರ್ಧಾರ ಶ್ಲಾಘನೀಯ
ಇಡೀ ಸಮಾಜದಲ್ಲಿ ನಿರ್ಲಕ್ಷೃಕ್ಕೆ ಒಳಗಾಗಿರುವ ಹಾಗೂ ತೀವ್ರ ಹಿಂದುಳಿದ ಬುಡಕಟ್ಟು ಸಮಾಜದ ವಿದ್ಯಾರ್ಥಿನಿಯಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ ಹರಿರಾಮ್ ಶಂಕರ್ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಈ ಕಾರ್ಯಕ್ರಮ ಬುಡಕಟ್ಟು ಜನಾಂಗದವರಿಗೆ ಪ್ರೇರಣೆಯಾಗಿದ್ದು, ಈ ರೀತಿ ಉತ್ತಮ ಕಾರ್ಯ ಮಾಡಿರುವುದು ಎಲ್ಲಾ ಅಧಿಕಾರಿಗಳಿಗೆ ಮಾದರಿಯಾಗಿದೆ.
ಆರ್. ಮರಿ ಜೋಸೆಫ್
ದಲಿತ ವಿಮೋಚನ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ

ಇಡೀ ಜಿಲ್ಲೆಯ ಜನರು ಅಂಗಡಿಹಳ್ಳಿಯ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರತ್ತ ನೋಡುವಂತೆ ಮಾಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು. ನಮ್ಮ ಸಮಾಜವನ್ನು ಗುರುತಿಸಿ ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಯುವತಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇನ್ನಿತರೆ ಹೆಣ್ಣುಮಕ್ಕಳಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಸ್ಫೂರ್ತಿ ತುಂಬಿದ್ದಾರೆ.
ಹೊರಾಜ್
ಬುಡಕಟ್ಟು ಹಕ್ಕಿ-ಪಿಕ್ಕಿ ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ

ಈ ಬಾರಿಯ ಸ್ವತಂತ್ರೊೃೀತ್ಸವವನ್ನು ವಿಶೇಷವಾಗಿ ಮಾಡುವ ಉದ್ದೇಶದಿಂದ ಸಮಾಜದಲ್ಲಿ ಶಿಕ್ಷಣದಿಂದ ಹೊರಗುಳಿಯುವ ಅಲೆಮಾರಿ ಜೀವನ ನಡೆಸುತ್ತಿರುವಂತಹ ಮಕ್ಕಳನ್ನು ಗುರುತಿಸಿ ಅವರಿಂದ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಹಿನ್ನೆಲೆಯಲ್ಲಿ ಸಂಗೀತಾ ಎಂಬ ವಿದ್ಯಾರ್ಥಿನಿ ಹಕ್ಕಿ-ಪಿಕ್ಕಿ ಸಮಾಜದಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಆಕೆಯಿಂದ ಧ್ವಜಾರೋಹಣ ನೆರವೇರಿಸಿದ್ದು ಇದರಿಂದ ಆ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಸಮಾನತೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅವರಿಗೆ ಪ್ರೇರಣೆಯಾಗಿದೆ. ಉನ್ನತ ಸ್ಥಾನಕ್ಕೆ ಏರಲಿ ಎಂಬುದು ನಮ್ಮ ಆಶಯ.

ಹರಿರಾಮ್ ಶಂಕರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಸನ