ಜಿಲ್ಲೆ

ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ.

ಮೈಸೂರು: ರಾಜ್ಯದ 5 ಆಶ್ರಮ ಶಾಲೆಗಳಲ್ಲಿ ಪಿಯುವರೆಗೆ ಶಿಕ್ಷಣ ಹಾಗೂ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರಂದೀಪ್ ಮಾಹಿತಿ ನೀಡಿದರು.

ಹುಣಸೂರು ತಾಲೂಕಿನ ನಲ್ಲೂರುಪಾಲ ಆಶ್ರಯ ಶಾಲೆಯಲ್ಲಿ ಮಕ್ಕಳಿಗೆ ಮುಂದುವರಿದ ಆರೋಗ್ಯ ತಪಾಸಣಾ ಶಿಬಿರ, ಶಾಲಾ ಮಕ್ಕಳು ಹಾಗೂ ಬುಡಕಟ್ಟು ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖಂಡರು ಮತ್ತು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಜೇನುಕುರುಬರಿಗೆ ಪ್ರತ್ಯೇಕ ಕಚೇರಿ ಬೇಕು, ನೇರ ನೇಮಕಾತಿಯಿಂದ ಕೆಲಸ ಕೊಡಬೇಕು, ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು, ಆರೋಗ್ಯದ ಬಗ್ಗೆ ಶಿಕ್ಷಣ ನೀಡಬೇಕು, ಆದಿವಾಸಿ ನಿಗಮ ಸ್ಥಾಪಿಸಬೇಕು, ಶಾಲೆಗೆ ಸಂಗೀತ ಶಿಕ್ಷಕರು ನೇಮಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು, ಬುಡಕಟ್ಟು ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟ್ ಕೊಡಿಸಬೇಕು ಎಂದು ಕೇಳಿದ್ದೀರಿ.

ನಿಮ್ಮ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಶೀಲಿಸಿ, ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಎಲ್ಲ ಆಶ್ರಮ ಶಾಲೆಗಳಿಲ್ಲೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ. ಮಕ್ಕಳು ಸ್ಪೋರ್ಟ್ಸ್ ಶೂ, ಶಿಕ್ಷಕರು ಜಾಕೆಟ್ ಬೇಕು ಎಂದಿದ್ದಾರೆ. ಅದನ್ನು ಒದಗಿಸಿಕೊಡುತ್ತೇವೆ. ಮಕ್ಕಳು ಚೆನ್ನಾಗಿ ಓದಬೇಕು. ಆಶ್ರಮ ಶಾಲೆಗಳಲ್ಲಿ ಓದಿದ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ಯಾವುದಾದರೂ ಒಂದು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಸ್ಪೋಕನ್ ಇಂಗ್ಲೀಷ್ ಕಲಿಯುವುದರೊಂದಿಗೆ ಕಂಪ್ಯೂಟರ್ ಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ.ಯೋಗೀಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆಹಾಡಿಗೆ ಭೇಟಿ ನೀಡಿದ ಮೇಲೆ ವಿಶೇಷ ಸಭೆ ಕರೆದು ಹಲವಾರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ. 119 ಆಶ್ರಮ ಶಾಲೆಗಳಿಗೆ ನುರಿತ ಶಿಕ್ಷಕರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ವಾರ್ಡನ್‌ಗಳು, ಅಡುಗೆ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲಾಗುತ್ತದೆ ಎಂದರು.

ಬುಡಕಟ್ಟು ಜನರು ಮನೆಕಟ್ಟಲು 1 ಮನೆಗೆ ನಾಲ್ಕೂವರೆ ಲಕ್ಷ ರೂ. ಆರ್ಥಿಕ ಇಲಾಖೆಯಿಂದ ಸಹಾಯಧನ ಅನುಮೋದನೆಯಾಗಿದೆ. ಇಲಾಖೆಯಲ್ಲಿ ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು. ಓದಿದ ನಂತರ ಆ ಮಕ್ಕಳಿಗೆ ಕೆಲಸ ಸಿಗಬೇಕು ಎಂಬು ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಸಮುದಾಯದವರ ಸಹಕಾರ ಬೇಕು ಎಂದು ಕೋರಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ.ಮಲ್ಲೇಶ್, ತಾಲೂಕು ಕಲ್ಯಾಣಾಧಿಕಾರಿ ಗಂಗಾಧರ್, ಡಾ. ರವೀಶ್ ಗಣಿ, ಲೆಕ್ಕಾಧಿಕಾರಿ ಭವ್ಯ, ಮುಖ್ಯಶಿಕ್ಷಕ ಚೇತನ್‌ಕುಮಾರ್, ಗುಣಧರ್, ಲಕ್ಷ್ಮಣ್, ಮೋಹನ್, ಕೃಷ್ಣಯ್ಯ, ರಾಜಪ್ಪ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.