ಸುರಪುರದ ರಂಗಂಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನ ಮತ್ತು ಕಲಾವಿದರ ಸತ್ಕಾರ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಸಹಕಾರ್ಯದರ್ಶಿ ಅಮರೇಶ ಹಸಮಕಲ್ ಮಾತನಾಡಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ, ಭೀಮರಾಯ ಮಂಗಳೂರು, ಶಿವಶರಣಪ್ಪ ಹೆಡಿಗಿನಾಳ ಇತರರಿದ್ದರು. 
ಜಿಲ್ಲೆ

ಬುಡಕಟ್ಟು ಕಲಾವಿದರ ನೆರವಿಗೆ ಸರ್ಕಾರ ಬರಲಿ

ಸುರಪುರ: ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ಕೆಲಸವನ್ನು ಬುಡಕಟ್ಟು ಕಲಾವಿದರು ಮಾಡುತ್ತಿದ್ದು, ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಸಹ ಕಾರ್ಯದರ್ಶಿ ಅಮರೇಶ ಹಸಮಕಲ್ ಕೋರಿದರು.

ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಕರ್ನಾಟಕ ಜಾನಪದ ಪರಿಷತ್, ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನ ಮತ್ತು ಬುಡಕಟ್ಟು ಕಲಾವಿದರ ಸತ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಿಂದ ಹಳ್ಳಿಗೆ ವಲಸೆ ಹೋಗಿ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತ ಕಲೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಬುಡಕಟ್ಟು ಕಲಾವಿದರು ಮುಖ್ಯ ವಾಹಿನಿಗೆ ಬರುವ ಅಗತ್ಯವಿದೆ. ವಿಶ್ವ ಸಂಸ್ಥೆಯು ಆ.೯ರಂದು ಬುಡಕಟ್ಟು ದಿನಾಚರಣೆ ಘೋಷಿಸಿದ್ದು, ವಿಶ್ವದೆಲ್ಲೆಡೆ ಅಲೆಮಾರಿ, ಆದಿವಾಸಿ, ಬುಡಕಟ್ಟು ಎಂಬುದಾಗಿ ಆಚರಿಸಲಾಗುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಮುಖ್ಯವಾಗಿ ಹಗಲುವೇಷ ಕಲಾವಿದರು ಬುಡಕಟ್ಟು ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಲಾವಿದರನ್ನು ಗುರುತಿಸಿ ನೆರವಿಗೆ ಧಾವಿಸಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯ ಭೀಮರಾಯ ಮಂಗಳೂರು ಮಾತನಾಡಿದರು. ಶಿವಶರಣಪ್ಪ ಹೆಡಿಗಿನಾಳ, ಮಲ್ಲು ಬಾದ್ಯಾಪುರ ಇತರರಿದ್ದರು. ಭಾಗ್ಯಶ್ರೀ ಕುಂಬಾರಪೇಟ ಪ್ರಾರ್ಥಿಸಿದರು. ಮೇಘಾ ದಾಯಿಪುಲೆ ಸ್ವಾಗತಿಸಿದರು. ಪವಿತ್ರಾ ನಿರೂಪಣೆ ಮಾಡಿದರು. ಅಖಿಲಾ ಜುಜಾರೆ ವಂದಿಸಿದರು.

ಸರ್ಕಾರ ಈಗಾಗಲೇ ಕಲಾವಿದರಿಗೆ ಮಾಸಾಶನ, ವಾರ್ಷಿಕ ಪ್ರಶಸ್ತಿ, ಗೌರವ ಪ್ರಶಸ್ತಿ ನೀಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಸದುಪಯೋಗ ಪಡೆದುಕೊಳ್ಳಬೇಕು.
| ಪ್ರಕಾಶ ಅಂಗಡಿ ಕನ್ನೆಳ್ಳಿ ಜಿಲ್ಲಾಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್