ಜಿಲ್ಲೆ

ಬುಡಕಟ್ಟು ಆಶ್ರಮ ಶಾಲೆಗೆ ನ್ಯಾಯಾಧೀಶರ ಭೇಟಿ


ಚಾಮರಾಜನಗರ : ತಾಲೂಕಿನ ರಂಗಸಂದ್ರ(ಬೂದಿಪಡಗ), ಕೋಳಿಪಾಳ್ಯ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ ಹಾಗೂ ಕೋಳಿಪಾಳ್ಯ ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.


ಶಾಲೆಯಲ್ಲಿನ ನಲಿ-ಕಲಿ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಹಾಗೂ ಶಾಲೆಯಲ್ಲಿ ನಡೆಯುತ್ತಿದ್ದ ಸ್ಮಾರ್ಟ್ ತರಗತಿಗಳನ್ನು ವೀಕ್ಷಿಸಿದ ನ್ಯಾಯಾಧೀಶ ಶ್ರೀಧರ್ ಅವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ನೀಡುತ್ತಿರುವ ಶಿಕ್ಷಣ ಹಾಗೂ ಉನ್ನತ ಮಟ್ಟದ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ನೀಡುತ್ತಿರುವುದನ್ನು ಶ್ಲಾಸಿದರು. ಶಾಲೆಯ ಪರಿಸರದ ಕುರಿತು ಸದಸ್ಯ ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಲೆಯ ಅನ್ನದಾಸೋಹದ ಅಡುಗೆ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ ನ್ಯಾಯಾಧೀಶರು, ಮಕ್ಕಳಿಗೆ ಪ್ರತಿದಿನ ನೀಡುವ ಊಟದ ಮೆನು ಹಾಗೂ ಆಡುಗೆ ಕೊಠಡಿಯ ಸ್ವಚ್ಛತೆ, ಅಲ್ಲಿನ ಅಡುಗೆ ಸಿಬ್ಬಂದಿ ಮಕ್ಕಳಿಗೆ ನಿಗದಿತ ಸಮಯಕ್ಕೆ ಊಟ ನೀಡಿ ಆರೋಗ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಂತೆ ಸೂಚಿಸಿದರು.


ಶಾಲೆಯ ಮಕ್ಕಳ ಜತೆ ಸಂವಾದ ನಡೆಸಿ, ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಹಾಗೂ ಮಕ್ಕಳ ಹಕ್ಕುಗಳ ಕುರಿತು ಹಾಗೂ ರಂಗಸಂದ್ರ ಗ್ರಾಮದಲ್ಲಿ ವಾಸ ಮಾಡುವ ಬುಡಕಟ್ಟು ಸಮುದಾಯ ಜನರಿಗೆ ದೊರಕಬಹುದಾದ ಸಾಂವಿಧಾನಿಕ ಹಕ್ಕುಗಳ ಕುರಿತು ಅರಿವು ಮೂಡಿಸಬೇಕಿದೆ. ಶಾಲೆಯ ಮಕ್ಕಳು ಮತ್ತು ಪಾಲಕರು ಬುಡಕಟ್ಟು ಜನಾಂಗದಿಂದ ಮುಖ್ಯ ವಾಹಿನಿಗೆ ಬರಲು ಮುಂದಾಗಬೇಕು ಎಂದರು.

ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ದೇವರಾಜಮೂರ್ತಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್, ಎನ್‌ಎಸ್‌ಎಸ್ ಅಧಿಕಾರಿ ಗಿರೀಶ್, ರಂಗಸಂದ್ರ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಎಂ.ಸೋಮಣ್ಣ, ಕೋಳಿಪಾಳ್ಯ ಆಶ್ರಮ ಶಾಲೆಯ ಶಿಕ್ಷಕಿ ನಾಗಮ್ಮ ಇತರರಿದ್ದರು.

ಕೋಳಿಪಾಳ್ಯ ಆರೋಗ್ಯ ಉಪ ಕೇಂದ್ರಕ್ಕೆ ಭೇಟಿ
ತಾಲೂಕಿನ ಕೋಳಿಪಾಳ್ಯ ಗ್ರಾಮದ ಆರೋಗ್ಯ ಉಪ ಕೇಂದ್ರ ಭೇಟಿ ನೀಡಿದ ನ್ಯಾಯಾಧೀಶ ಎಂ.ಶ್ರೀಧರ್, ಆರೋಗ್ಯ ಕೇಂದ್ರದ ಸ್ವಚ್ಛತೆ, ಶೌಚ ಗೃಹ ಹಾಗೂ ಹೊರಾಂಗಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಚಿಕಿತ್ಸೆ ಕೋರಿ ಬರುವ ಸಾರ್ವಜನಿಕರಿಗೆ, ರೋಗಿಗಳಿಗೆ ಉತ್ತಮವಾದ ಔಷಧಗಳನ್ನು ನೀಡಬೇಕು. ಆರೋಗ್ಯ ಕೇಂದ್ರಕ್ಕೆ ಬರುವ ಗರ್ಭಿಣಿಯರು, ಮಹಿಳೆಯರು ಹಾಗೂ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಗೃಹದ ನೈರ್ಮಲ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಉಪ ಕೇಂದ್ರದ ವೈದ್ಯಾಧಿಕಾರಿ ಸಚಿನ್, ಶೂಶ್ರೂಷಕಿ ಮಂಗಳಮ್ಮ, ಅರೆಕಾಲಿಕ ಕಾನೂನು ಸ್ವಯಂ ಸೇವಕರಾದ ಮೀನಾಕುಮಾರಿ, ಅನು, ಗ್ರಾಮಸ್ಥರು ಇದ್ದರು.