ಜಿಲ್ಲೆ

ಬೀದಿನಾಯಿಗಳಿಗಿಲ್ಲ ಕಡಿವಾಣ

ಆರು ತಿಂಗಳಲ್ಲಿ ಒಂಭತ್ತು ಸಾವಿರ ಕಡಿತ ಪ್ರಕರಣಗಳು; ಮೂರು ಸಾವು

ಎ.ಆರ್. ವೆಂಕಟೇಶ್

ಹಾಸನ: ನಗರ, ಪಟ್ಟಣ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಇತ್ತೀಚೆಗೆ ಬೀದಿ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಆರು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಒಟ್ಟು 8990 ಬೀದಿನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಮೂರು ಪ್ರಕರಣಗಳಲ್ಲಿ ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಅದರಲ್ಲಿ ಒಂದು ಪ್ರಕರಣ ಹೊಳೆನರಸೀಪುರ ತಾಲೂಕಿನದು, ಉಳಿದೆರಡು ಹಾಸನ ತಾಲೂಕಿನವು.
ಹಾಸನ ನಗರದ ಮಿರ್ಜಾ ಮೊಹಲ್ಲಾದಲ್ಲಿ ಬುಧವಾರ ಒಬ್ಬ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಮುಖ, ಕೆನ್ನೆಯನ್ನು ಕಚ್ಚಿ ಗಾಯಗೊಳಿಸಿವೆ. ವಾರದ ಹಿಂದೆ ಆಲೂರು ಪಟ್ಟಣದಲ್ಲೂ ಮಕ್ಕಳು, ವೃದ್ಧರು ಸೇರಿ 9 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಬೀದಿನಾಯಿಗಳ ಜನ ನಿಯಂತ್ರಣ ಕ್ರಮ ಕೈಗೊಳ್ಳದೇ ಇರುವುದು ಬೀದಿ ನಾಯಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕೋಳಿ ಮತ್ತು ಮಾಂಸ ಮಾರಾಟ ಅಂಗಡಿಗಳು ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯುವುದು ಮತ್ತಿತರ ಕಾರಣಗಳಿಂದಾಗಿ ಬೀದಿನಾಯಿಗಳು ಮಾಂಸದ ರುಚಿ ಅಭ್ಯಾಸವಾಗಿ ಮಕ್ಕಳ ಮೇಲೆ ದಾಳಿ ಮಾಡಲಾರಂಭಿಸಿವೆ ಎಂಬುದು ನಾಗರಿಕರ ದೂರು.


ಬೆಳಗಿನ ವೇಳೆ ಹಿರಿಯ ನಾಗರಿಕರು ಒಂಟಿಯಾಗಿ ವಾಯುವಿಹಾರಕ್ಕೆ ಹೋಗುವುದು ಕಷ್ಟವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರಿಗಂತೂ ಬೀದಿನಾಯಿಗಳು ಸಿಂಹಸ್ವಪ್ನವಾಗಿವೆ. ಬೀದಿನಾಯಿಗಳು ಇದ್ದಕ್ಕಿದ್ದ ಹಾಗೆ ಅಟ್ಟಿಸಿಕೊಂಡು ಬರುವುದರಿಂದ ಅವುಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ.

30 ಸಾವಿರ ಬೀದಿನಾಯಿಗಳು:
ಪಶುಪಾಲನಾ ಇಲಾಖೆಯ ಅಂಕಿಅಂಶಗಳ ಪ್ರಕಾರ ಹಾಸನ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಬೀದಿನಾಯಿಗಳಿವೆ. ನಗರಸಭೆ, ಪುರಸಭೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಕ್ರಮ ಕೈಗೊಳ್ಳದೇ ಇರುವುದರಿಂದ ನಾಯಿಗಳ ಸಂತತಿ ಹೆಚ್ಚುತ್ತಿದೆ. ನಿರ್ದಿಷ್ಟ ಪ್ರಕರಣ ಮತ್ತು ಸಂದರ್ಭಗಳನ್ನು ಹೊರತುಪಡಿಸಿ ಬೀದಿನಾಯಿಗಳನ್ನು ಕೊಲ್ಲಲು ಅಥವಾ ಸ್ಥಳಾಂತರಿಸಲು ಕಾನೂನು ಪ್ರಕಾರ ಅವಕಾಶ ಇಲ್ಲದಿರುವುದು ಸಹ ನಾಯಿಗಳ ನಿಯಂತ್ರಣಕ್ಕೆ ಅಡ್ಡಿ ಆಗಿದೆ ಎನ್ನಲಾಗಿದೆ.

ಸಂತಾನಹರಣದಿಂದ ನಾಯಿಗಳ ನಿಯಂತ್ರಣ ಸಾಧ್ಯ:
ನಿಯಮಿತವಾಗಿ ಗಂಡುನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು ಮಹಾನಗರ ಪಾಲಿಕೆ ಮತ್ತಿತರ ಪಾಲಿಕೆಗಳಲ್ಲಿ ಈ ರೀತಿಯ ಕಾರ್ಯ ಆಗುತ್ತಿದೆ. ಹಾಸನ ನಗರದಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯ ನಡೆದು ವರ್ಷ ಕಳೆದರೂ ನಗರಸಭೆ ಇತ್ತ ಗಮನಹರಿಸಿಲ್ಲ.

ಲಸಿಕೆ ಕೊರತೆ ಇಲ್ಲ:‘‘ನಾಯಿ ಕಡಿತಕ್ಕೆ ಲಸಿಕೆ ಕೊರತೆ ಇಲ್ಲ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೇಬೀಸ್ ನಿರೋಧಕ ಚುಚ್ಚುಮದ್ದು ಲಭ್ಯವಿದೆ. ನಾಯಿ ಕಡಿತಕ್ಕೆ ಒಳಗಾದವರು ನಿಗದಿತ ದಿನಗಳಂದು ಒಟ್ಟು 5 ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ತೀರಾ ಆಳವಾದ ಗಾಯ, ಮುಖದಲ್ಲಿ ಗಾಯವಾಗಿದ್ದರೆ ‘ಇಮ್ಯುನೊಗ್ಲೊಬುಲಿನ್’ ಎಂಬ ದುಬಾರಿ ಇಂಜಕ್ಷನ್ ಪಡೆಯಬೇಕಾಗುತ್ತದೆ. ಈ ಚುಚ್ಚುಮದ್ದಿನ ಒಂದು ವಾಯಿಲ್ ಬೆಲೆ 9 ಸಾವಿರ ರೂ. ಹಾಗಾಗಿ ಇದನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ವೈದ್ಯ ಕಾಲೇಜಿನಲ್ಲಿ ಮಾತ್ರ ಇಡಲಾಗಿರುತ್ತದೆ. ಅಂತಹ ಪ್ರಕರಣಗಳು ಬಂದಾಗ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ’’- ಡಾ. ಬಿ.ಎನ್. ಶಿವಸ್ವಾಮಿ, ಡಿಎಚ್‌ಒ, ಹಾಸನ.
ಎಲ್ಲ ನಾಯಿಗಳಿಗೆ ಉಚಿತ ಲಸಿಕೆ:‘‘ಬೀದಿನಾಯಿಗಳ ನಿಯಂತ್ರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖ. ಅವರಿಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ತಾಂತ್ರಿಕ ನೆರವು ನೀಡಲು ಪಶುಪಾಲನಾ ಇಲಾಖೆ ಸಿದ್ಧವಿದೆ. ಅಲ್ಲದೆ, ಸೆಪ್ಟೆಂಬರ್ 28 ರಂದು ವಿಶ್ವ ರೇಬಿಸ್ ದಿನಾಚರಣೆ ಇರುವುದರಿಂದ ಸೆ.1 ರಿಂದ 28 ರವರೆಗೆ ಜಿಲ್ಲೆಯಲ್ಲಿ ಎಲ್ಲ ನಾಯಿಗಳಿಗೆ ರೇಬಿಸ್ ಪ್ರತಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.’’- ಡಾ. ರಮೇಶ್, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಹಾಸನ.
ಬೀದಿನಾಯಿಗಳ ನಿಯಂತ್ರಣಕ್ಕೆ ಶೀಘ್ರ ಕ್ರಮ:‘‘ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವುದು ನಗರಸಭೆ ಗಮನಕ್ಕೆ ಬಂದಿದೆ. ನಗರದಲ್ಲಿ ಒಂದು ಸಾವಿರ ಗಂಡು ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಸಂಬಂಧ ಈಗಾಗಲೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇನ್ನು ಒಂದುವರೆ ತಿಂಗಳಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಅಲ್ಲದೆ, ನಗರದಲ್ಲಿ ಒಣಕಸ ಮತ್ತು ಹಸಿ ಕಸದ ಪ್ರತ್ಯೇಕ ಸಂಗ್ರಹಣೆ ಮತ್ತು ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಉಲ್ಲಂಘಿಸು ಮನೆಗಳು ಮತ್ತು ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.’’ - ಪರಮೇಶ್ವರಪ್ಪ, ಆಯುಕ್ತರು, ನಗರಸಭೆ, ಹಾಸನ
ಗೋಶಾಲೆ ಮಾದರಿ ಆಸರೆ ಕಲ್ಪಿಸಲಿ:‘‘ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಲು ನಗರಸಭೆ ನಿರ್ಲಕ್ಷೃವೇ ಕಾರಣ. ನಿಯಮಿತವಾಗಿ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ಇಲ್ಲದಿದ್ದರೆ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಗೋಶಾಲೆಗಳ ಮಾದರಿಯಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಿ. ಮಕ್ಕಳು ಬೆಳಗಿನ ವೇಳೆ ಸೈಕಲ್‌ಗಳಲ್ಲಿ ಶಾಲೆ, ಕಾಲೇಜುಗಳಿಗೆ ಹೋಗುವುದು ಕಷ್ಟವಾಗುತ್ತಿದೆ.’’- ಹೇಮಂತ್, ನಾಗರಿಕ, ಹಾಸನ.