ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸುತ್ತಿರುವುದು. 
ಜಿಲ್ಲೆ

ಬೀದಿಗೆ ಬಂದ ಕಾಂಗ್ರೆಸ್ ಸಂಸ್ಕೃತಿ

ಬೇಲೂರು: ಹಿಂದುಗಳನ್ನು ಕೆರಳಿಸುವ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೂಲಕ ಕಾಂಗ್ರೆಸ್ ಸಂಸ್ಕೃತಿ ಬೀದಿಗೆ ಬಂದಿದ್ದು, ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಆಗ್ರಹಿಸಿದರು.

ಕಾಂಗ್ರೆಸ್ ಶಾಸಕ ಹಾಗೂ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದು ವಿರೋಧಿ ಹೇಳಿಕೆ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿ ಮಾತನಾಡಿದರು.

ಹಿಂದು ಎಂಬ ಪದ ಭಾರತೀಯವೇ ಅಲ್ಲ, ಅದು ಪರ್ಶಿಯನ್ ಅಂತ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿ ದೇಶದ ಕೋಟ್ಯಂತರ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಇಂತಹ ಹೇಳಿಕೆ ನೀಡಿದ ಜಾರಕಿಹೊಳಿಯನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆದು, ಕಾಂಗ್ರೆಸ್ ಅವರನ್ನು ಪ್ರಾಥಾಮಿಕ ಸದಸ್ಯತ್ವದಿಂದಲೇ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಚಿದಾನಂದ್ ಮಾತನಾಡಿ, ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದು ಧರ್ಮದ ಮೇಲೆ ಸವಾರಿ ಮಾಡುತ್ತಾ ಬಂದಿದೆ. ಇದೇ ಪರಂಪರೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಂದುವರಿಸಿದ್ದಾರೆ. ಕೇಸರಿ ಬಣ್ಣ ಕಂಡರೆ ಸಿದ್ದರಾಮಯ್ಯರಿಗೆ ಹಾವು ಚೇಳು ಕಂಡಂತಾಗುತ್ತದೆ. ಅನ್ಯ ಧರ್ಮದ ಆಚರಣೆ ಅನುಸರಿಸುವ ಇವರಿಗೆ ಹಿಂದುಸ್ಥಾನದಲ್ಲಿರುವ ನೈತಿಕತೆ ಇಲ್ಲ ಎಂದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ದೇಶದಲ್ಲಿ ಮುಕ್ತವಾಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಭಾರತ್ ತೋಡೊ ಯಾತ್ರೆ ಕೈಗೊಂಡಿದ್ದಾರೆ. ಬಹುಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆ ಮೇಲೆ ಗದಾ ಪ್ರಯೋಗ ಮಾಡುವ ಕಾಂಗ್ರೆಸ್ ಪಕ್ಷ ಸದ್ಯದಲ್ಲಿಯೇ ಇತಿಹಾಸದ ಪುಟ ಸೇರಲಿದೆ ಎಂದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರೇಣುಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ ಸಂಪತ್ ಕುಮಾರ್, ಪುರಸಭಾ ಸದಸ್ಯ ಪ್ರಭಾಕರ್, ನಾಮಿನಿ ಸದಸ್ಯರಾದ ಪೈಂಟ್ ರವಿ, ಜಗದೀಶ್, ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ, ಮುಖಂಡರಾದ ಶಶಿ, ವಿಜಯಕುಮಾರ್, ಜುಂಜಯ್ಯ, ಚೇತನ್, ಜಯಮ್ಮ, ರಂಗನಾಥ್ ಇದ್ದರು.