ಜಿಲ್ಲೆ

ಬೀದಿ ಹೆಣವಾದ ರೌಡಿ ಶೀಟರ್

haripsklr

ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆ ಸಂಬಂಧ ಮಾಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ಎಎಸ್ಪಿ ಜಾಹ್ನವಿ, ಸಿಪಿಐ ಮಾರ್ಕೊಂಡಪ್ಪ, ಪಿಎಸ್‍ಐ ಅನಿಲ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಿರೀಶ್ ವಿರುದ್ದ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ರೌಡಿ ಶೀಟ್ ತೆರೆದಿದ್ದರು. ಪ್ರಕರಣವೊಂದರ ಸಂಬಂಧ ಬೆಳಗ್ಗೆ ಕೋಲಾರದ ನ್ಯಾಯಾಲಯಕ್ಕೆ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಕಿರಣ್ ಜತೆಗೆ ತೆರಳಿ ಗ್ರಾಮಕ್ಕೆ ಸಂಜೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಗಂಗಾಪುರ ಗೇಟ್ ಬಳಿ ದ್ವಿಚಕ್ರ ವಾಹನ ತಡೆದ ಐದಾರು ಜನರ ತಂಡ ವಾಹನ ಚಲಾಯಿಸುತ್ತಿದ್ದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು ಮತ್ತು ಲಾಂಗ್‍ಗಳಿಂದ ಭೀಕರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಲೂರು ತಾಲೂಕಿನ ಅರಳೇರಿ ಗ್ರಾಮದ ವಾಸಿ ಗಿರೀಶ್ (25) ಕೊಲೆಯಾಗಿರುವ ರೌಡಿ ಶೀಟರ್. ಈತನ ಜೆತೆಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿದ್ದ ಸ್ನೇಹಿತ ತಾಳಕುಂಟೆ ಗ್ರಾಮದ ಕಿರಣ್ ದುಷ್ಕರ್ಮಿಗಳ ತಂಡದಿಂದ ಕೂದಲೆಳೆಯಲ್ಲಿ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.

ಹಲವು ಅಪರಾಧ ಪ್ರಕರಣಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ರೌಡಿ ಶೀಟರ್ ಪಟ್ಟ ಕಟ್ಟಿಕೊಂಡಿದ್ದ ಗಿರೀಶ್ ಅದೇ ಅಪರಾಧ ಜಗತ್ತಿನಲ್ಲಿ ತೊಡಗಿಕೊಂಡವರಿಂದಲೇ ಭೀಕವಾಗಿ ಕೊಲೆಯಾಗಿ ಬೀದಿ ಹೆಣವಾದ ಘಟನೆ ನಡೆದಿದೆ.

ವಿಜಯವಾಣಿ ಸುದ್ದಿಜಾಲ ಕೋಲಾರ