ಜಿಲ್ಲೆ

ಬೀದಿ ಸ್ವಚ್ಛತೆಗೆ ಆದ್ಯತೆ ನೀಡಿ

ಸಕಲೇಶಪುರ: ಮನೆಯಂತೆ ಬೀದಿಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.


ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕತೆ ಹೆಚ್ಚಿದಂತೆ ತ್ಯಾಜ್ಯದ ಸಮಸ್ಯೆಯೂ ಹೆಚ್ಚಾಗುತ್ತಿದೆ. ಸ್ಥಳೀಯ ಆಡಳಿತ ಸ್ವಚ್ಛತೆ ಎಷ್ಟೇ ಕಾರ್ಯಕ್ರಮ ಹಮ್ಮಿಕೊಂಡರೂ ಸಾರ್ವಜನಿಕರ ಸ್ಪಂದನೆ ದೊರೆಯದಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂದರು.


ಸಾರ್ವಜನಿಕ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಕಲ್ಪನೆ ಜನರಲ್ಲಿ ಮೊಳೆತಾಗ ಮಾತ್ರ ಪಟ್ಟಣ ಸುಂದರವಾಗಲು ಸಾದ್ಯ. ಈ ನಿಟ್ಟಿನಲ್ಲಿ ಜನರು ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಅನುಪಯುಕ್ತ ವಸ್ತುಗಳನ್ನು ಪುರಸಭೆ ಸೂಚಿಸಿದೆಡೆ ಹಾಕುವುದನ್ನು ತಮ್ಮ ಕರ್ತವ್ಯ ಎಂದು ಪರಿಗಣಿಸುವ ಮೂಲಕ ಸಕಲೇಶಪುರವನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳಲು ಸಹಕರಿಸ ಬೇಕು ಎಂದರು.


ಇದೇ ವೇಳೆ ಶಾಸಕ ಸಿಮೆಂಟ್ ಮಂಜು ಅವರನ್ನು ಪೌರಾಡಳಿತದಿಂದ ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಕಾಡಪ್ಪ, ಸದಸ್ಯರಾದ ಪ್ರದೀಪ್,ಯಾದಗಾರ್ ಇಬ್ರಾಹಿಂ,ಮುಖ್ಯಾಧಿಕಾರಿ ಜಯಣ್ಣ ಮುಂತಾದವರಿದ್ದರು.