ಕುಮಟಾ: ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳುವ ಬೀದಿ ಬದಿ ವ್ಯಾಪಾರಿಗಳಿಗೆ ಕ್ಯಾಶ್ಬ್ಯಾಕ್ ಸೌಲಭ್ಯ ಒದಗಿಸಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ. ಸುರೇಶ ಹೇಳಿದರು.
ಪಟ್ಟಣದ ಹಳೇ ಮೀನುಪೇಟೆ ಸಮುದಾಯ ಭವನದಲ್ಲಿ ಶುಕ್ರವಾರ ಪುರಸಭೆ ವತಿಯಿಂದ ಏರ್ಪಡಿಸಿದ್ದ ‘ನಾನು ಕೂಡ ಡಿಜಿಟಲ್’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಿಜಿಟಲ್ ವಹಿವಾಟು ಹೆಚ್ಚು ಸುರಕ್ಷಿತ ಹಾಗೂ ಪಾರದರ್ಶಕ ಎಂದ ಅವರು, ಆತ್ಮನಿರ್ಭರ ಯೋಜನೆಯಲ್ಲಿ ಈಗಾಗಲೇ ಸಾಲ ಪಡೆದ ಫಲಾನುಭವಿಗಳು ಮೊಬೈಲ್ ತಂತ್ರಾಂಶದ ಮೂಲಕ ಮರುಪಾವತಿಸಬಹುದಾದ ವಿಧಾನಗಳನ್ನು ವಿವರಿಸಿದರು.
ಮುಖ್ಯಾಧಿಕಾರಿ ಸುರೇಶ ಎಂ.ಕೆ. ಮಾತನಾಡಿ, ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ)ಯಡಿ ಫಲಾನುಭವಿಗಳಿಗೆ ಡಿಜಿಟಲ್ ವಹಿವಾಟಿನ ತರಬೇತಿಗಾಗಿ ವಿಶೇಷ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬರೂ ಡಿಜಿಟಲ್ ವಹಿವಾಟು ನಡೆಸುವ ಮೂಲಕ ನಾನು ಕೂಡ ಡಿಜಿಟಲ್ ಎಂದು ದೇಶ ಕಟ್ಟುವ ಕಾಯಕದಲ್ಲಿ ಹೆಮ್ಮೆಯಿಂದ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದರು.
ಪುರಸಭೆ ಸದಸ್ಯ ಟೋನಿ ರೊಡ್ರಿಗಿಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ಸಂತೋಷ, ಕೆವಿಜಿ ಪಟ್ಟಣ ಶಾಖಾ ಬ್ಯಾಂಕಿನ ವ್ಯವಸ್ಥಾಪಕ ಕಾರ್ತಿಕ, ಕೆವಿಜಿ ಬ್ಯಾಂಕ್ ಎಪಿಎಂಸಿ ಶಾಖೆಯ ವ್ಯವಸ್ಥಾಪಕಿ ಸುಧಾ ಕಡೆಕೋಡಿ ಉಪಸ್ಥಿತರಿದ್ದರು. ಸಮುದಾಯ ಸಂಯೋಜಕಿ ಮೀನಾಕ್ಷಿ ಆಚಾರಿ ಸಂಘಟಿಸಿ ನಿರ್ವಹಿಸಿದರು.