ಜಿಲ್ಲೆ

ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

ಪಾಂಡವಪುರ: ಪುರಸಭೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೀದಿ ಬದಿ ವ್ಯಾಪಾರಿಗಳು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಕಚೇರಿ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸುಂಕ ವಸೂಲಾತಿಯನ್ನು ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ನೀಡಲಾಗಿದೆ. ಪ್ರತಿಯೊಂದು ಪದಾರ್ಥಕ್ಕೂ ಇಂತಿಷ್ಟು ಸುಂಕ ಪಾವತಿಸುವಂತೆ ಪುರಸಭೆ ನಿಗದಿಪಡಿಸಿದೆ. ಆದರೆ ಗುತ್ತಿಗೆ ಪಡೆದಿರುವ ವ್ಯಕ್ತಿಗಳು ನಿಗದಿಗಿಂತ ಹೆಚ್ಚಿನ ಸುಂಕ ವಸೂಲಿ ಮಾಡುತ್ತಿದ್ದಾರೆ. ಹೆಚ್ಚಿನ ಸುಂಕ ಕೊಡಲು ನಿರಾಕರಿಸಿದರೆ ವ್ಯಾಪಾರಕ್ಕೆ ಅವಕಾಶ ನೀಡದೆ ಪದಾರ್ಥಗಳನ್ನು ತೆರವುಗೊಳಿಸಲು ಮುಂದಾಗುತ್ತಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು ಮತ್ತು ಮುಖ್ಯಾಧಿಕಾರಿ ವೀಣಾ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಪುರಸಭೆ ನಿಗದಿಪಡಿಸಿರುವ ಸುಂಕಕ್ಕಿಂತ ಒಂದು ರೂಪಾಯಿಯನ್ನೂ ಹೆಚ್ಚಿಗೆ ಕೊಡಬಾರದು. ಹೆಚ್ಚಿನ ಸುಂಕಕ್ಕೆ ಒತ್ತಾಯಿಸಿದರೆ ದೂರು ನೀಡುವಂತೆ ಸೂಚಿಸಿದರು. ಈ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಗಮನಕ್ಕೆ ತಂದು ಪುರಸಭೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿ.ಕೆ.ವಿಶ್ವನಾಥ್, ಉಪಾಧ್ಯಕ್ಷ ಹಿರೇಮರಳಿ ಯೋಗೇಶ್, ಗೌರವಾಧ್ಯಕ್ಷ ಶಾಂತಿಪ್ರಸಾದ್, ಸ್ವಾಭಿಮಾನಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗರಾಜು, ರಾಮಣ್ಣ, ಸೌತೆಕಾಯಿ ರಾಣಿ, ಭಾರತಿ, ವಿಷ್ಣು ವಿಠಲ ಇತರರು ಇದ್ದರು.