ಹಿರೇಬಾಗೇವಾಡಿ, ಬೆಳಗಾವಿ: ಗ್ರಾಮದಲ್ಲಿ ಕಸ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ವಿಜಯವಾಣಿ ಪತ್ರಿಕೆ ‘ಹಿರೇಬಾಗೇವಾಡಿಯಲ್ಲಿ ತ್ಯಾಜ್ಯ ವಿಲೇವರಿ’ ಎಂಬ ಶೀರ್ಷಿಕೆಯಡಿ ಮಂಗಳವಾರ ಪ್ರಕಟಿಸಿದ್ದ ವರದಿಗೆ ಸ್ಪಂದಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬುಧವಾರ ಕಸ ಮತ್ತು ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.
ಸಾರ್ವಜನಿಕರು ಎಸೆದ ಕಸ, ಹಸಿ ಮತ್ತು ಒಣ ತ್ಯಾಜ್ಯ ಇತ್ಯಾದಿಗಳಿಂದ ಗ್ರಾಮವೆಲ್ಲ ಗಬ್ಬೆದ್ದು ನಾರುತ್ತಿತ್ತು. ತಿಂಗಳುಗಟ್ಟಲೇ ಬಿದ್ದ ತ್ಯಾಜ್ಯದಿಂದ ಗ್ರಾಮದ ಸೌಂದರ್ಯವೇ ಹಾಳಾಗಿತ್ತು. ಕಸ ಮತ್ತು ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಯ ನಡೆಸಿರಲಿಲ್ಲ. ವರದಿ ಗಮನಿಸಿ ಎಚ್ಚೆತ್ತುಕೊಂಡ ಅವರು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ತ್ಯಾಜ್ಯವನ್ನೆಲ್ಲ ವಿಲೇವಾರಿ ಮಾಡಿದ್ದಾರೆ. ಅದಲ್ಲದೆ, ಕಸ ಚೆಲ್ಲುತ್ತಿರುವ ಜಾಗಗಳಲ್ಲಿ ಸಾರ್ವಜನಿಕರ ತಿಳಿವಳಿಕೆಗಾಗಿ ರಾಜ್ಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿ ಅಶೋಕಾ ಬಿಲ್ಡಕಾನ್ ವತಿಯಿಂದ ಹೆದ್ದಾರಿಗುಂಟ ಕಸ ಎಸೆಯದಂತೆ ‘ಇಲ್ಲಿ ಕಸ ಚೆಲ್ಲಬಾರದು’ ಎಂಬ ನಾಮಫಲಕಗಳನ್ನು ಅಂಟಿಸಲಾಗಿದೆ.
ಅಲ್ಲದೆ ಹೆದ್ದಾರಿಯಲ್ಲಿ ಚೆಲ್ಲಿದ ತ್ಯಾಜ್ಯದಲ್ಲಿ ಆಹಾರ ಹುಡುಕಲು ಬರುವ ನಾಯಿ, ಹಂದಿ ಇತ್ಯಾದಿಗಳು ರಸ್ತೆಯಲ್ಲಿ ಅಡ್ಡಲಾಗಿ ಸಂಚರಿಸಿ ವಾಹನ ಸವಾರರಿಗೆ ಅಪಘಾತಪಡಿಸಿದರೆ ಅದಕ್ಕೆ ನೇರವಾಗಿ ಗ್ರಾಮ ಪಂಚಾಯಿತಿಯವರೇ ಹೊಣೆಗಾರರಾಗಬೇಕಾಗುತ್ತದೆ ಹೊರತು ಗುತ್ತಿಗೆದಾರ ಅಶೋಕಾ ಬಿಲ್ಡಕಾನ್ ಅಲ್ಲ. ಹೆದ್ದಾರಿಯಲ್ಲಿ ಬಿದ್ದ ಕಸ, ತ್ಯಾಜ್ಯ ತೆಗೆಯುವುದು ಪಂಚಾಯಿತಿ ಅಥವಾ ಮಹಾನಗರ ಪಾಲಿಕೆಯವರ ಕೆಲಸ ಎಂಬ ಅರ್ಜಿಯನ್ನು ಗ್ರಾಪಂಗೆ ಮತ್ತು ಪೊಲೀಸ್ ಠಾಣೆಗೆ ಕಂಪನಿ ವತಿಯಿಂದ ಸಲ್ಲಿಸಲಾಗಿದೆ.