ಹುಬ್ಬಳ್ಳಿ: ಕೆಲಸ ಹುಡುಕಿಕೊಂಡು ಗೋವಾದ ಕಡೆಗೆ ಹೊರಟಿದ್ದಾಗ ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕು ಕ್ವಾರಂಟೈನ್ಗೆ ಒಳಪಟ್ಟಿದ್ದ ತಿರುಪತಿ ಮೂಲದ ಒಂದೇ ಕುಟುಂಬದ ಎಂಟು ಕಾರ್ವಿುಕರು ಇದೀಗ ಬೀದಿ ಪಾಲಾಗಿದ್ದಾರೆ. ಕೆ. ಪ್ರಸಾದ, ಕುಮಾರಿ, ಲಕ್ಷ್ಮೀನಾರಾಯಣ ಹಾಗೂ ಕುಟುಂಬದವರು ಕೆಲಸಕ್ಕಾಗಿ ತಿರುಪತಿಯಿಂದ ಗೋವಾ ಕಡೆಗೆ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿಯ ರೈಲು ನಿಲ್ದಾಣದ ಬಳಿ ಭಿಕ್ಷೆ ಬೇಡಿಕೊಂಡು ಓಡಾಡಿಕೊಂಡಿದ್ದರು. ಆ ವೇಳೆ ವಿಚಾರಿಸಿದ ಪೊಲೀಸರು ಅವರನ್ನು ಗೋಪನಕೊಪ್ಪ ಹಾಸ್ಟೆಲ್ವೊಂದರಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದರು. ಲಾಕ್ಡೌನ್ ಬಗ್ಗೆ ಅರಿವೇ ಇಲ್ಲದ ಕಾರ್ವಿುಕರನ್ನು ಅವರ ಒಪ್ಪಿಗೆ ಮೇರೆಗೆ 45 ದಿನಗಳ ಕಾಲ ಹಾಸ್ಟೆಲ್ನಲ್ಲಿ ಇಡಲಾಗಿತ್ತು. ಬಳಿಕ ಅವರನ್ನು ಸ್ಟೇಶನ್ ರಸ್ತೆಯ ಹರ್ಷ ಕಾಂಪ್ಲೆಕ್ಸ್ ಬಳಿಯ ಹಾಸ್ಟೆಲ್ವೊಂದಕ್ಕೆ ಸ್ಥಳಾಂತರಿಸಲಾಗಿತ್ತು. 1 ವಾರದ ಬಳಿಕ ಅಧಿಕಾರಿಗಳು ‘ನೀವಿನ್ನು ಹೋಗಬಹುದು’ ಎಂದು ಹೊರಗೆ ಕಳಿಸಿದ್ದಾರೆ. ನಮಗೆ ಉಳಿದುಕೊಳ್ಳಲು ಮನೆಯಿಲ್ಲ. ಊಟಕ್ಕೆ, ಊರಿಗೆ ಹೋಗಲೂ ಹಣವಿಲ್ಲ ಎಂದು ನೋವು ತೋಡಿಕೊಂಡರು.
ಇಬ್ಬರು ಅಂಗವಿಕರು ಇದ್ದಾರೆ: ಕುಮಾರಿ ಜತೆಗೆ ಇಬ್ಬರು ವೃದ್ಧರು, ಇಬ್ಬರು ಅಂಗವಿಕಲರು, ಇಬ್ಬರು ಮಕ್ಕಳು ಇದ್ದಾರೆ. ಅವರನ್ನು ವೀಲ್ ಚೇರ್ನಲ್ಲೇ ತಳ್ಳಿಕೊಂಡು ಓಡಾಡಬೇಕಿದೆ. ಒಪ್ಪೊತ್ತು ಊಟಕ್ಕೂ ಇಲ್ಲ. ನಮ್ಮ ಸಂಕಷ್ಟ ಕಂಡ ಸ್ಥಳೀಯರು ಆಗಾಗ ಊಟ, ಉಪಾಹಾರ ತಂದುಕೊಡುತ್ತಿದ್ದಾರೆ. ದಯವಿಟ್ಟು ತಿರುಪತಿಗೆ ಹೋಗಲು ಅನುವು ಮಾಡಿಕೊಡಿ ಎಂದು ಕುಮಾರಿ ಹಾಗೂ ಕುಟುಂಬದವರು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.