ಜಿಲ್ಲೆ

ಬೀದಿ ನಾಯಿಗಳ ಹಾವಳಿ ತಡೆಗೆ ಮನವಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂಧು ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರಸಭಾ ಅಧ್ಯಕ್ಷ ಸುರೇಶ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.

ನಗರಸಭಾ ಕಚೇರಿಯಲ್ಲಿ ಮನವಿ ಸಲ್ಲಿಸಿದ ಬಳಿಕ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಶ್ರೀಭುವನೇಶ್ವರಿ ವೃತ್ತ, ಶ್ರೀಭುಜಂಗೇಶ್ವರ ಬಡಾವಣೆ, ಭ್ರಮರಾಂಬ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಸುತ್ತಮುತ್ತಲು ಪ್ರದೇಶಗಳಲ್ಲಿ ಮತ್ತು ಸಂತೇಮರಹಳ್ಳಿ ವೃತ್ತ, ರೈಲು ನಿಲ್ದಾಣ ಮತ್ತು ಇತರೆ ಕಡೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಿದರು.

ಈಗಾಗಲೇ ಬೀದಿ ನಾಯಿಗಳು ಜನರಿಗೆ ಕಚ್ಚಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕದಿದ್ದರೆ ಬೀದಿಗಳಲ್ಲಿ ಓಡಾಡದೇ ಇರುವ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ತಕ್ಷಣವೇ ನಗರಸಭೆ ವತಿಯಿಂದ ನಗರದಲ್ಲಿ ಬೀದಿ ನಾಯಿ ಹಾವಳಿಗಳನ್ನು ತಪ್ಪಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ನಗರಸಭೆ ವತಿಯಿಂದ ಈಗಾಗಲೇ 800 ಬೀದಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದ್ದು, ಕಾನೂನು ಪ್ರಕಾರ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿಜಧ್ವನಿ ಗೋವಿಂದರಾಜು, ಸುರೇಶ್ ವಾಜಪೇಯಿ, ತಾಂಡವಮೂರ್ತಿ, ಪಣ್ಯದಹುಂಡಿ ರಾಜು, ರಾಚಪ್ಪ ಉಪಸ್ಥಿತರಿದ್ದರು.