ಆರ್.ಕೃಷ್ಣ ಮೈಸೂರು
ಬೀದಿ ನಾಯಿಗಳ ನರಳಾಟಕ್ಕೆ ಮುಕ್ತಿ ನೀಡುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆ ‘ನಾಯಿಗಳ ಪುನರ್ವಸತಿ ಕೇಂದ್ರ’ ನಿರ್ಮಾಣಕ್ಕೆ ಮುಂದಾಗಿದೆ.
ಎಚ್.ಡಿ.ಕೋಟೆ ರಸ್ತೆಯ ರಾಯನಕೆರೆ ಘನತ್ಯಾಜ್ಯ ನಿರ್ವಹಣಾ ಘಟಕದ ಬಳಿ ಇರುವ ಸುಮಾರು 5 ಎಕರೆ ಜಾಗದಲ್ಲಿ ಬೀದಿನಾಯಿಗಳಿಗಾಗಿ ಪುನರ್ವಸತಿ ಕೇಂದ್ರ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಮನೆಯಲ್ಲಿ ಸಾಕುವ ನಾಯಿಗಳನ್ನು ಮಾಲೀಕರು ಜೋಪಾನ ಮಾಡುತ್ತಾರೆ. ಆದರೆ ಬೀದಿ ನಾಯಿಗಳ ರಕ್ಷಣೆಗೆ ಯಾರೂ ಮುಂದಾಗುವುದಿಲ್ಲ. ಅವುಗಳಿಗೆ ಅನಾರೋಗ್ಯ ಉಂಟಾದರೆ ಪೋಷಣೆ, ಉಪಚಾರ ಮಾಡಲು ಯಾರೂ ಇರುವುದಿಲ್ಲ. ಹೀಗಾಗಿ ಮೂಕಪ್ರಾಣಿಗಳ ನರಳಾಟ ನೋಡುವವರ ಮನ ಮಿಡಿಯುವಂತೆ ಮಾಡುತ್ತದೆ. ಆದ್ದರಿಂದ ಜನರ ಒಡನಾಡಿಗಳಂತೆ ಇರುವ ಬೀದಿ ನಾಯಿಗಳು ನರಳಾಡಬಾರದು ಎನ್ನುವ ಉದ್ದೇಶದಿಂದ ಮತ್ತು ಕೆ.ಆರ್.ಕ್ಷೇತ್ರದ ಈ ಹಿಂದಿನ ಶಾಸಕ ಎಸ್.ಎ.ರಾಮದಾಸ್ ಅವರ ಕಾಳಜಿಯಿಂದ ಪುನರ್ವಸತಿ ಕೇಂದ್ರ ರೂಪ ತಾಳುತ್ತಿದೆ. ಅಲ್ಲದೆ, ಅವರು ಅಂದಿನ ತಮ್ಮ ಶಾಸಕರ ನಿಧಿಯಿಂದ 2 ಕೋಟಿ ರೂ. ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಂಡಿದೆ.
ಸಾಮಾನ್ಯವಾಗಿ ಬೀದಿ ನಾಯಿಗಳಿಗೆ ಆಸರೆ, ಆರೈಕೆ ಇರುವುದಿಲ್ಲ. ಅದರಲ್ಲೂ ಅವುಗಳು ಅನಾರೋಗ್ಯಕ್ಕೆ ಒಳಗಾದರೆ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಹೀಗಾಗಿ ಯಾವುದೋ ಹೋಟೆಲ್, ರಸ್ತೆ ಹಾಗೂ ಪಾರ್ಕ್ ಬಳಿ ಅಸ್ವಸ್ಥಗೊಂಡು ಬಿದ್ದಿರುತ್ತವೆ. ಅನಾರೋಗ್ಯಕ್ಕೆ ತುತ್ತಾಗಿರುವ ಇಂತಹ ಶ್ವಾನಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಕೊಟ್ಟರೆ ಸಾಕು, ಅವುಗಳನ್ನು ಈ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತದೆ. ಕಾಯಿಲೆಯಿಂದ ಶ್ವಾನ ಗುಣಮುಖವಾದ ಮೇಲೆ ಮತ್ತೆ ಅವು ಎಲ್ಲಿ ಇದ್ದವೋ ಆ ಸ್ಥಳಕ್ಕೆ ತಂದು ಬಿಡಲಾಗುತ್ತದೆ. ದೀರ್ಘಕಾಲ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಶ್ವಾನವನ್ನು ಕೇಂದ್ರದಲ್ಲೇ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತದೆ.
ಒಂದು ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಶ್ವಾನ ಮೃತಪಟ್ಟರೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಕೇಂದ್ರದಿಂದಲೇ ಅವಕಾಶ ಕಲ್ಪಿಸಲಾಗುತ್ತದೆ. ಅದಕ್ಕೆ ಬೇಕಾದ ವಿದ್ಯುತ್ ಚಾಲಿತ ಸುಡುವ ಯಂತ್ರ ಅಳವಡಿಕೆಯೂ ನಡೆಯುತ್ತಿದೆ. ಇದರೊಂದಿಗೆ ಶ್ವಾನ ಪ್ರೀತಿಸುವವರು ಹಾಗೂ ವಿವಿಧ ಸಂಘ - ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ‘ಡಾಗ್ ಅಸೋಸಿಯೇಷನ್’ ಮಾಡುವ ಚಿಂತನೆ ಸಹ ನಡೆದಿದೆ.
ನಾಯಿಗಳ ಆರೈಕೆ ಜತೆಗೆ ಆಹಾರವನ್ನು ಕೇಂದ್ರದಲ್ಲೇ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಹೋಟೆಲ್‌ಗಳು ಉಳಿಕೆ ಆಹಾರವನ್ನು ಬೀದಿಗೆ ಬಿಸಾಡದೆ ಕೇಂದ್ರಕ್ಕೆ ನೀಡುವಂತೆ ಹೋಟೆಲ್ ಮಾಲೀಕರ ಸಂಘವನ್ನು ಪಾಲಿಕೆಯಿಂದ ಕೋರಲಾಗಿದೆ. ಹೀಗೆ ಹೋಟೆಲ್‌ಗಳಲ್ಲಿ ಸಂಗ್ರಹಿಸಿದ ಆಹಾರವನ್ನು ವಾಹನದ ಮೂಲಕ ಪುನವರ್ಸತಿ ಕೇಂದ್ರಕ್ಕೆ ತಲುಪಿಸಲಾಗುತ್ತದೆ.
ನಾಯಿಗಳಿಗೆ ಸಂತಾನಶಕ್ತಿ ಹರಣ:
ಬೀದಿನಾಯಿಗಳ ಹೆಚ್ಚಳದಿಂದ ಉಂಟಾಗುವ ಉಪಟಳ ತಡೆಯಲು ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ), ಸರ್ವೋದಯ ಫೌಂಡೇಷನ್ ಸಹಯೋಗದಲ್ಲಿ 12 ವರ್ಷಗಳಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬೀದಿ ನಾಯಿಗಳ ಸಂಸತಿ ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ.
ಹೋಟೆಲ್, ಮನೆಗಳ ಬಳಿ ಬಿಸಾಡುವ ಆಹಾರ ತಿನ್ನುವ ಜತೆಗೆ ಮಕ್ಕಳು, ದೊಡ್ಡವರ ಮೇಲೂ ನಾಯಿಗಳು ಕೆಲವೊಮ್ಮೆ ದಾಳಿ ಮಾಡಿರುವ ದೂರುಗಳು ನಗರಪಾಲಿಕೆಗೆ ಬರುತ್ತಿದ್ದವು. ನಾಯಿಗಳನ್ನು ಕೊಲ್ಲುವುದು ಅಥವಾ ಸ್ಥಳಾಂತರ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿರುವುದರಿಂದ ಎನ್‌ಜಿಒ ಸಹಯೋಗದೊಂದಿಗೆ ನಾಯಿಗಳ ಸಂತತಿ ತಡೆಯುವ ಕಾರ್ಯ ನಡೆದಿದೆ.
ಇದಕ್ಕಾಗಿ ಪಶುವೈದ್ಯಾಧಿಕಾರಿ ನೇತೃತ್ವದಲ್ಲಿ 16 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಿತ್ಯ ಸುಮಾರು 20ರಷ್ಟು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಜತೆಗೆ ಶಸ್ತ್ರಚಿಕಿತ್ಸೆ ಸರಿಯಾಗಿ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಬೋಗಾದಿ ಬಳಿ ಪೀಪಲ್ ಫಾರ್ ಅನಿಮಲ್ಸ್ ಕೇಂದ್ರ ಇದ್ದು, ದೂರು ಬಂದ ಕಡೆಗಳಲ್ಲಿ ನಾಯಿಗಳನ್ನು ಹಿಡಿದು ಅಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಶಸ್ತ್ರಚಿಕಿತ್ಸೆ ಬಳಿಕ ಕೆಲ ದಿನ ಆರೈಕೆ ಮಾಡಿ ಅವುಗಳನ್ನು ಎಲ್ಲಿ ಹಿಡಿಯಲಾಗಿತ್ತೋ ಅಲ್ಲಿಗೇ ತಂದು ಬಿಡಲಾಗುತ್ತಿದೆ. ಈ ಮೂಲಕ ನಾಯಿಗಳ ಸಂತತಿಯ ಶೀಘ್ರ ಬೆಳವಣಿಗೆಗೆ ತಡೆ ಹಾಕಲಾಗುತ್ತಿದೆ.
ಡಾಗ್‌ಪಾರ್ಕ್‌ಗೆ ಪ್ರಸ್ತಾಪ
ಜನರು ವಾಯುವಿಹಾರಕ್ಕೆ ಪಾರ್ಕ್‌ಗಳನ್ನು ಬಳಸುವಂತೆ ನಾಯಿಗಳ ವಾಯುವಿಹಾರಕ್ಕೆ ಪ್ರತ್ಯೇಕ ಪಾರ್ಕ್ ನಿರ್ಮಿಸಲು ನಗರಪಾಲಿಕೆ ಉದ್ದೇಶಿಸಿದೆ. ಈ ಹಿಂದೆ ಶಾರದಾದೇವಿನಗರ ಬಳಿ ಇರುವ ಉದ್ಯಾನವನ್ನು ನಾಯಿಗಳ ಪಾರ್ಕ್‌ಗೆ ಮೀಸಲಿಡಲು ಚಿಂತನೆ ನಡೆಸಲಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದ ಆ ಪ್ರಸ್ತಾವನೆ ಕೈಬಿಡಲಾಗಿತ್ತು. ಸಾಮಾನ್ಯ ಪಾರ್ಕ್‌ಗಳಿಗೆ ನಾಯಿಗಳನ್ನು ಕರೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿರುವುದರಿಂದ ನಾಯಿಗಳಿಗೆ ಪ್ರತ್ಯೇಕ ಪಾರ್ಕ್ ಬೇಕು ಎನ್ನುವ ಒತ್ತಾಯ ಶ್ವಾನಪ್ರಿಯರಿಂದ ಕೇಳಿಬರುತ್ತಿದೆ. ಹೀಗಾಗಿ ಮತ್ತೆ ಪ್ರತ್ಯೇಕ ಪಾರ್ಕ್ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಜಾಗ ಗುರುತಿಸುವ ಕಾರ್ಯ ಪಾಲಿಕೆಯಿಂದ ಆಗುತ್ತಿದೆ.
ಶೀಘ್ರ ಕಾಮಗಾರಿ ಪೂರ್ಣ
ಮನುಷ್ಯರಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕು ಇದೆ. ಹೀಗಾಗಿ ಅನಾರೋಗ್ಯದಿಂದ ನರಳುವ ಬೀದಿ ನಾಯಿಗಳ ಚಿಕಿತ್ಸೆಗಾಗಿ ರಾಯನಕೆರೆ ಬಳಿ ಪುನವರ್ಸತಿ ಕೇಂದ್ರ ನಿರ್ಮಿಸಲಾಗುತ್ತಿದೆ. ಸುಮಾರು 5 ಎಕರೆ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಕೇಂದ್ರ ಆರಂಭಿಸಲಾಗುವುದು. ನಾಯಿಗಳಿಗೆ ವಾಯುವಿಹಾರಕ್ಕಾಗಿ ಪ್ರತ್ಯೇಕ ಪಾರ್ಕ್ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಾಗ ಗುರುತಿಸುವ ಕಾರ್ಯ ನಡೆದಿದೆ.
ಶಿವಕುಮಾರ್ ಮೇಯರ್