ಜಿಲ್ಲೆ

ಬೀದಿ ದೀಪ ನಿರ್ವಹಣೆ ನಿರ್ಲಕ್ಷ್ಯ

ಹುಬ್ಬಳ್ಳಿ : ಅವಳಿ ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ. ನಿತ್ಯ ಬಹುತೇಕ ಕಡೆ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಕತ್ತಲೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೀದಿ ದೀಪ ನಿರ್ವಹಣೆಗೆ ಸಂಬಂಧಪಟ್ಟಂತೆ ಪಾಲಿಕೆಯ ಸಹಾಯವಾಣಿ (ಕಂಟ್ರೋಲ್ ರೂಂ)ಗೆ ತಿಂಗಳಿಗೆ 3-4 ಸಾವಿರ ದೂರುಗಳು ಬರುತ್ತಿವೆ. ಅಂದರೆ, ನಿತ್ಯ ನೂರಕ್ಕೂ ಹೆಚ್ಚು ದೂರುಗಳು. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗೆ ಮಳೆಗಾಲದಲ್ಲಿ ಯುಜಿಡಿ (ಒಳಚರಂಡಿ) ಸಮಸ್ಯೆ ಕುರಿತು ಹೆಚ್ಚು ದೂರುಗಳು ಬಂದಿರುತ್ತವೆ. ಉಳಿದ ದಿನಗಳಲ್ಲಿ ಬೀದಿ ದೀಪಗಳ ಸಮಸ್ಯೆಯೇ ದಾಖಲೆ ಬರೆಯುತ್ತದೆ.

ಹುಬ್ಬಳ್ಳಿಯ ಕೇಶ್ವಾಪುರ, ಭವಾನಿನಗರ ಧೋಬಿಘಾಟ್, ಹಳೇ ಹುಬ್ಬಳ್ಳಿ ಇಂಡಿ ಪಂಪ್, ಹೆಗ್ಗೇರಿ, ಬೈಲಪ್ಪನವರನಗರ ಮುಖ್ಯರಸ್ತೆ, ನ್ಯೂ ಕಾಟನ್ ಮಾರ್ಕೆಟ್ ಕೆಲ ಭಾಗ, ಇತ್ಯಾದಿ ಕಡೆ ರಾತ್ರಿ ವೇಳೆ ಸಂಚರಿಸುವುದು ಕಷ್ಟ. ಎಷ್ಟೋ ಕಡೆ ವಿದ್ಯುತ್ ಕಂಬಗಳಿದ್ದು, ದೀಪಗಳೇ ಇರುವುದಿಲ್ಲ. ಬೀದಿ ದೀಪಗಳ ವಿಷಯದಲ್ಲಿ ಸಾರ್ವಜನಿಕರು ದೂರು ನೀಡುವುದು ಕಡಿಮೆ. ಅದರಲ್ಲೂ ನಿತ್ಯ ನೂರಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತವೆ ಎಂದಾದರೆ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ವಾರ್ಷಿಕ 4.18 ಕೋಟಿ ರೂ. ವೆಚ್ಚ
ಅವಳಿ ನಗರದ ಬೀದಿ ದೀಪಗಳ ನಿರ್ವಹಣೆಗೆ ಪಾಲಿಕೆ 1 ವರ್ಷದ ಅವಧಿಗೆ 4,17,93,460 ರೂ. ಖರ್ಚು ಮಾಡುತ್ತಿದೆ. ಪ್ರತಿ ವಲಯ ಕಚೇರಿಗೆ ಒಬ್ಬರಿಗೆ ನಿರ್ವಹಣೆ ಗುತ್ತಿಗೆಯನ್ನು ನೀಡಿದೆ. ಕೆಟ್ಟು ಹೋದ ಟ್ಯೂಬ್​ಲೈಟ್, ಹೆಲೋಜಿನ್ ಬಲ್ಬ್, ಹೈ ಮಾಸ್ಟ್ ದೀಪಗಳು, ಚೋಕ್, ಇತ್ಯಾದಿ ಪರಿಕರಗಳನ್ನು ಬದಲಾಯಿಸುವುದು, ದುರಸ್ತಿ ಪಡಿಸುವುದು ಗುತ್ತಿಗೆದಾರರ ಕೆಲಸವಾಗಿದೆ. ಹುಬ್ಬಳ್ಳಿಯ ಒಬ್ಬರು 2 ವಲಯ ಕಚೇರಿಗಳ ವ್ಯಾಪ್ತಿಗೆ ಹಾಗೂ ಉಳಿದಂತೆ ವಿಜಯಪುರ, ಬ್ಯಾಡಗಿ, ಭದ್ರಾವತಿ, ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯವರು ನಿರ್ವಹಣೆ ಗುತ್ತಿಗೆ ಹಿಡಿದಿದ್ದಾರೆ.

ಜನರೇ ಕೈಯಿಂದ ಹಣ ಹಾಕಿದ್ದರು
ಕೇಶ್ವಾಪುರ ಬೆಳವಂಕಿ ಕಾಲನಿ ನಿವಾಸಿಗಳು ಬೀದಿ ದೀಪ ಅಳವಡಿಕೆಗಾಗಿ 1 ವರ್ಷದಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡುತ್ತಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಇದರಿಂದ ಬೇಸತ್ತು ಸ್ಥಳೀಯರೇ ಕೈಯಿಂದ ಹಣ ಹಾಕಿ ಬೆಳವಂಕಿ ಕಾಲನಿ 1ನೇ ಕ್ರಾಸ್ ಹಾಗೂ 2ನೇ ಕ್ರಾಸ್​ನಲ್ಲಿ ಹೆಲೋಜಿನ್ ಲೈಟ್ ಸೆಟ್ ಅಳವಡಿಸಿದ್ದರು. ಆದರೆ, ಇತ್ತೀಚೆಗೆ ವಿದ್ಯುತ್ ಕಂಬ ಬದಲಾವಣೆ ಮಾಡಿದ ಪಾಲಿಕೆ ಸಿಬ್ಬಂದಿ ಹೆಲೋಜಿನ್ ಲೈಟ್ ಸೆಟ್​ಗಳನ್ನು ತೆಗೆದುಕೊಂಡು ಹೋದರು. ಹೊಸ ಕಂಬದಲ್ಲಿ ದೀಪವಿಲ್ಲದೆ ಹಾಗೇ ಉಳಿಯಿತು. ಈ ಬಗ್ಗೆ ದೂರು ನೀಡಿದಾಗ ಹಳೇಯ ಸೆಟ್​ಗೆ ಟ್ಯೂಬ್​ಲೈಟ್ ಅಳವಡಿಸಿ ಹೋಗಿದ್ದರು. ಮೊದಲಿದ್ದಂತೆ ಹೆಲೋಜಿನ್ ಸೆಟ್ ಅಳವಡಿಸುವಂತೆ ಪಾಲಿಕೆಗೆ ಕೋರಿದ್ದೇವೆ ಎಂದು ಸ್ಥಳೀಯರಾದ ರಿಷಬ್ ಶ್ರೀಶ್ರೀಮಲ್ ಹಾಗೂ ಅನಿಲ ಮೋಡ್ ತಿಳಿಸಿದ್ದಾರೆ.

ಬೀದಿ ದೀಪಗಳ ನಿರ್ವಹಣೆ
ಸಾರ್ವಜನಿಕ ದೂರುಗಳ ವಿವರ
ತಿಂಗಳು-----ದೂರುಗಳ ಸಂಖ್ಯೆ
ಅಕ್ಟೋಬರ್-20 --4832
ನವಂಬರ್ -20 --3902
ಡಿಸೆಂಬರ್- 20 -- 3584
ಜನವರಿ --21 --3145
(26ರ ವರೆಗೆ)

ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರುಗಳಿಗೆ ಗುತ್ತಿಗೆದಾರರು ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಮೊದಲು ದೂರುಗಳಿಗೆ ಸ್ಪಂದಿಸುವ ಪ್ರಮಾಣ ಶೇ. 60-70 ರಷ್ಟಿತ್ತು. ಈಗ ಶೇ. 95ಕ್ಕೆ ಏರಿಕೆಯಾಗಿದೆ. ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ