ಎನ್.ಆರ್.ಪುರ: ಪಟ್ಟಣದಲ್ಲಿ ಸಿಸಿಎಂಎಸ್ ಅಡಿ ಅಳವಡಿಸಿರುವ ಬೀದಿ ದೀಪಗಳು ಪ್ರಖರ ಬೆಳಕು ನೀಡದಿರುವುದು ಹಾಗೂ ಹಾಳಾದ ಬೀದಿ ದೀಪಗಳ ಬದಲಿಗೆ ಬೇರೆ ದೀಪಗಳನ್ನು ಅಳವಡಿಸದಿರುವ ಕುರಿತು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಶುಕ್ರವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರೀನಾ ಮೋಹನ್, ವಾರ್ಡ್ ನಂ5ರಲ್ಲಿ ಬೀದಿ ದೀಪಗಳು ಸಮರ್ಪಕ ಬೆಳಕು ನೀಡುತ್ತಿಲ್ಲ ಎಂದು ದೂರಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಸಿಸಿಎಂಎಸ್ ಯೋಜನೆಯಡಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಪ್ರಖರ ಬೆಳಕು ನೀಡದೆ ಇದ್ದುದರಿಂದ ಪಟ್ಟಣದಲ್ಲಿ ಇದನ್ನು ಅಳವಡಿಸಲು ವಿರೋಧಿಸಲಾಗಿತ್ತು. ಆದರೂ ಜಿಲ್ಲಾಧಿಕಾರಿ ಖಾಸಗಿ ಕಂಪನಿಗೆ ಕಾರ್ಯಾದೇಶ ನೀಡಿದರು. ಹಾಗಾಗಿ ಜಿಲ್ಲಾಧಿಕಾರಿಯೇ ಇದಕ್ಕೆ ಹೊಣೆಗಾರರಾಗಿದ್ದು, ಡಿಸಿ ಪಟ್ಟಣ ಪಂಚಾಯಿತಿಗೆ ಬಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸಲಿ ಎಂದು ಒತ್ತಾಯಿಸಿದರು. ಬೀದಿ ದೀಪದ ಸಮಸ್ಯೆ ಬಗ್ಗೆ ಇಂಧನ ಸಚಿವರಿಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.
ಜುಬೇದಾ ಮಾತನಾಡಿ, ಶಾಲಾ ಕಾಲೇಜು ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ಸಮೀಪದ ಮುಖ್ಯರಸ್ತೆ ಹಾಗೂ ಜೀವನ್ ಜ್ಯೋತಿ ಶಾಲೆ ಮುಂಭಾಗದ ರಸ್ತೆ ಝಿಬ್ರಾಕ್ರಾಸಿಂಗ್ ಮಾಡಿಸಬೇಕೆಂದು ತಿಳಿಸಿದರು. ರಜಿ ಮಾತನಾಡಿ, ಬಸ್ ನಿಲ್ದಾಣದ ಬಳಿಯಿರುವ ರಸ್ತೆ ವಿಭಜಕ ಕತ್ತಲೆಯಲ್ಲಿ ಕಾಣುವುದಿಲ್ಲ. ಇದಕ್ಕೆ ಬಿಳಿ ಬಣ್ಣ ಬಳಿಯಬೇಕೆಂದು ಸಲಹೆ ನೀಡಿದರು.
ಪಟ್ಟಣ ವ್ಯಾಪ್ತಿಯ ಸಿಎ ನಿವೇಶನಗಳಲ್ಲಿ ಒಂದು ನಿವೇಶನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಕಾಯ್ದಿರಿಸಲು ಸಭೆ ಒಪ್ಪಿಗೆ ನೀಡಿತು. ವಿದ್ಯುತ್ ಸಮರ್ಪಕವಾಗಿ ಪೂರೈಸುವಂತೆ ಮೆಸ್ಕಾಂಗೆ ಪತ್ರ ಬರೆಯಲು ಸಭೆ ನಿರ್ಧರಿಸಿತು. ನೀರಿನ ಸುಂಕ, ಆಸ್ತಿ ತೆರಿಗೆ ವಸೂಲಾತಿಗಾಗಿ ಕಾಮಧೇನು ಸ್ವಸಹಾಯ ಸಂಘ ಮುಂದೆ ಬಂದಿದ್ದು 7ಮತ್ತು 8ನೇ ವಾರ್ಡ್‌ಅನ್ನು ಪ್ರಾಯೋಗಿಕವಾಗಿ ನೀಡಲು ಸಭೆ ತೀರ್ಮಾನಿಸಿತು. ಉದ್ಯಾನದ ದೀಪಕ್ಕೆ ಹಾಗೂ ಬೀದಿ ದೀಪಕ ಕಂಬಕ್ಕೆ ವಿದ್ಯುತ್ ಸಂಪರ್ಕ ಕೊಡುವಂತೆ ಸಭೆ ಸೂಚಿಸಿತು. 2025-26ನೇ ವಾರ್ಷಿಕ ಬಹಿರಂಗ ಹರಾಜುಗಳಾದ ಸಂತೆ ಶುಲ್ಕ, ಬಸ್ ನಿಲ್ದಾಣದ ಸುಂಕ ಸಭೆಯಲ್ಲಿ ಸ್ಥಿರೀಕರಿಸಲಾಯಿತು. ಮೀನು ಮಾರುಕಟ್ಟೆ ಮಳಿಗೆಗಳಿಗೆ ಹೊಸದಾಗಿ ವಿದ್ಯುತ್ ಮೀಟರ್ ಅಳವಡಿಸಲು ತೀರ್ಮಾನಿಸಲಾಯಿತು.
ಪಪಂ ಅಧ್ಯಕ್ಷೆ ಸುರಯ್ಯಬಾನು, ಉಪಾಧ್ಯಕ್ಷೆ ಉಮಾ ಕೇಶವ್, ಪ್ರಶಾಂತ್ ಎಲ್. ಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಲಕ್ಷ್ಮಣೇಗೌಡ, ಸದಸ್ಯರು ಇದ್ದರು.