ಬೀದರ್: ಕರೊನಾ ವಾರಿಯರ್ಸ್ಗಳಿಗೂ ಈಗ ಕರೊನಾ ಕಾಟ ಕಾಡುತ್ತಿದೆ. ಮುಖ್ಯ ಪೇದೆಯೊಬ್ಬರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗಾಂಧಿಗಂಜ್ ಪೊಲೀಸ್ ಠಾಣೆ ಭಾನುವಾರ ಸೀಲ್ಡೌನ್ ಮಾಡಲಾಗಿದೆ.
ಠಾಣೆಯ 43 ವರ್ಷದ ಮುಖ್ಯ ಪೇದೆಗೆ ಭಾನುವಾರ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಠಾಣೆಯ ಮೂವರು ಪಿಎಸ್ಐ, 4 ಎಎಸ್ಐ ಸೇರಿ 54 ಸಿಬ್ಬಂದಿಗೆ ಕ್ವಾರಂಟೈನ್ ಮಾಡಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಕಲಬುರಗಿ ಈಶಾನ್ಯ ವಲಯ ವ್ಯಾಪ್ತಿಯಲ್ಲಿ ಸೀಲ್ಡೌನ್ ಮಾಡಿದ ಮೊದಲ ಠಾಣೆ ಇದಾಗಿದೆ. ಸಹಪಾಠಿ ಪೇದೆಗೆ ಸೋಂಕು ತಗುಲಿದ್ದರಿಂದ ಎಲ್ಲ ಸಿಬ್ಬಂದಿ ಮತ್ತವರ ಕುಟುಂಬದವರಲ್ಲಿ ಆತಂಕ ಮೂಡಿದೆ.
ಜ್ವರ, ಕೆಮ್ಮು, ನೆಗಡಿ, ನಿಶಕ್ತತೆ ಕಾರಣ 26ರಂದು ಇವರ ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಔರಾದ್ ತಾಲೂಕಿನ ನಿಡೋದಾ ಗ್ರಾಮದ ಪೇದೆ ನಗರದ ಲಾಡಗೇರಿಯಲ್ಲಿ ವಾಸವಿದ್ದಾರೆ. ಕರ್ತವ್ಯ ಸೇರಿ ಇತರ ಸಂದರ್ಭದಲ್ಲಿ ವಿವಿಧೆಡೆ ಸುತ್ತಾಡಿದ್ದಾರೆ. ಹೀಗಾಗಿ ಯಾರ್ಯಾರು ಇವರ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಪತ್ತೆ ನಡೆದಿದೆ.
ಪ್ರಕರಣವೊಂದರ ಕುರಿತು ಇತ್ತೀಚೆಗೆ ಗಾಂಧಿಗಂಜ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಂಧಿತನಿಗೆ ಪಾಸಿಟಿವ್ ಬಂದ ನಂತರ ಪಿಎಸ್ಐ ಮಂಜನಗೌಡ ಸೇರಿ 10 ಪೊಲೀಸರಿಗೆ ಕ್ವಾರಂಟೈನ್ಗೆ ಸೂಚಿಸಲಾಗಿತ್ತು. ಇನ್ನು ಇವರು ಕ್ವಾರಂಟೈನ್ನಲ್ಲಿದ್ದ ವೇಳೆಯೇ ಇದೇ ಠಾಣೆ ಪೇದೆಗೆ ಸೋಂಕು ಬಂದಿದ್ದ ಕಾರಣ ಸಂಪೂರ್ಣ ಠಾಣೆ ಬಂದ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಕರೊನಾ ರಣಕೇಕೆ ಮುಂದುವರಿದಿದೆ. ಭಾನುವಾರ ಮತ್ತೆ 7 ಜನರಿಗೆ ಪಾಸಿಟಿವ್ ಬಂದಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 563ಕ್ಕೇರಿದೆ. ಬಸವಕಲ್ಯಾಣದ 60 ವರ್ಷದ ಮಹಿಳೆ, 45, 64 ವರ್ಷದ ಪುರುಷ, ಮೊರಖಂಡಿ ಗ್ರಾಮದ 39 ವರ್ಷದ ಮಹಿಳೆ, ಭೋಸ್ಗಾ ಗ್ರಾಮದ 16 ವರ್ಷದ ಯುವತಿ, ಔರಾದ್ ತಾಲೂಕಿನ ನಿಡೋದಾ ಗ್ರಾಮದ 43 ವರ್ಷದ ಪುರುಷ ಹಾಗೂ ಕಮಲನಗರದ 55 ವರ್ಷದ ಪುರುಷನಿಗೆ ಸೋಂಕು ಅಂಟಿದೆ.
ಮಾರ್ಕೆಟ್ ಠಾಣೆಗೆ ಬನ್ನಿ: ಮುಖ್ಯ ಪೇದೆಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗಾಂಧಿಗಂಜ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ದೂರು ಅಥವಾ ಇತರ ಕೆಲಸಗಳ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಗೆ ಭೇಟಿ ನೀಡಲು ಎಸ್ಪಿ ಡಿ.ಎಲ್. ನಾಗೇಶ ತಿಳಿಸಿದ್ದಾರೆ. ಪೇದೆಗೆ ಸೋಂಕು ದೃಢಪಟ್ಟಿದ್ದರಿಂದ ಇವರ ಸಂಪರ್ಕದಲ್ಲಿದ್ದ ಇತರ ಅಧಿಕಾರಿ, ಸಿಬ್ಬಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಹೀಗಾಗಿ ಗಾಂಧಿಗಂಜ್ ಠಾಣೆಯ ಎಲ್ಲ ಕಾರ್ಯಚಟುವಟಿಕೆ ಮಾರ್ಕೆಟ್ ಠಾಣೆಯಿಂದ ನಡೆಯಲಿದೆ. ಯಾವುದೇ ದೂರು, ಇತರ ಕೆಲಸಗಳಿಗಾಗಿ ಗಾಂಧಿಗಂಜ್ ಠಾಣೆ ವ್ಯಾಪ್ತಿಯ ಜನರು ಮಾರ್ಕೆಟ್ ಠಾಣೆಗೆ ಹೋಗುವಂತೆ ತಿಳಿಸಿದ್ದಾರೆ.