ಬೀದರ್: ಕಲೆ, ಸಂಸ್ಕೃತಿ ಹಾಗೂ ಜಾನಪದ ಸಂರಕ್ಷಣೆಗೆ ಗಡಿ ಜಿಲ್ಲೆ ಬೀದರ್ನಲ್ಲಿ ಜಾನಪದ ಭವನ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ಉಷಾ ಪ್ರಭಾಕರ ಹೇಳಿದರು.
ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ಪ್ರತಿಭಾವಂತ ಜಾನಪದ ಕಲಾವಿದರಿಗೆ ಸೂಕ್ತ ತರಬೇತಿ ನೀಡಲು ಭವನ ಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ಕಲಾವಿದರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಹಿರಿಯ ಕಲಾವಿದರು, ಜಾನಪದ ಪರಿಷತ್ ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತೆ ಇರುವ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಜಾನಪದ ಸಂಸ್ಕೃತಿ ಉಳಿದರೆ ಮಾತ್ರ ಉಜ್ವಲ ಭವಿಷ್ಯ ಎಂಬ ಭಾವನೆ ಎಲ್ಲರಲ್ಲಿ ಬರಬೇಕಾಗಿದೆ ಎಂದು ಹೇಳಿದರು.
ಹಾಸ್ಯ ಕಲಾವಿದೆ, ಸಾಹಿತಿ ಇಂದುಮತಿ ಸಾಲಿಮಠ ಮಾತನಾಡಿ, ಆಧುನಿಕತೆಗೆ ಅತಿಯಾಗಿ ಒಗ್ಗಿಕೊಂಡು ಹಾಳಾಗಬಾರದು. ಹಿಂದಿನ ಹೆಣ್ಣು ಮಕ್ಕಳು ಕುಟ್ಟುತ್ತ, ಬೀಸುತ್ತ ಹಾಡು ಹಾಡುತ್ತಿದ್ದರು. ಆದರೆ ಇಂದಿನ ಮಹಿಳೆಯರಿಗೆ ಸರಿಯಾಗಿ ಬೀಸಲು, ಹೋಳಿಗೆ ಮಾಡಲು ಬರಲ್ಲ. ಹಾಡುವುದಂತೂ ದೂರದ ಮಾತು. ಜಾನಪದ ಸಂಸ್ಕೃತಿ ಪ್ರತಿ ಹೆಜ್ಜೆಗೂ ಹೊಸ ಪಾಠ ಮತ್ತು ಸಾಮಾಜಿಕ ಮೌಲ್ಯ ಕಲಿಸಿಕೊಡುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಉದ್ಘಾಟಿಸಿದರು. ಡಾ.ಮಹಾದೇವಿ ಹೆಬ್ಬಾಳೆ ಮಾತನಾಡಿದರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೈಜಿನಾಥ ಕಮಠಾಣೆ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯ ಎಸ್.ಜಿ. ಹುಗ್ಗೆಪಾಟೀಲ್, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ, ಈಶ್ವರಿ ಮೈಲಾರೆ, ಶಂಕ್ರೆಪ್ಪ ಹೊನ್ನಾ, ವಿಜಯಕುಮಾರ ಮಡ್ಡೆ, ಪ್ರೊ.ಎಸ್.ಬಿ. ಬಿರಾದಾರ, ಸವಿತಾ ಸಾಕೋಳೆ, ಡಾ.ಸುನೀತಾ ಕೂಡ್ಲಿಕರ್ ಇದ್ದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಮಹಾನಂದಾ ಮಡಕಿ ನಿರೂಪಣೆ ಮಾಡಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.
ಎಷ್ಟೇ ಪ್ರಗತಿ ಸಾಧಿಸಿದರೂ ಜಾನಪದ ಬೇಕು: ಪ್ರಸ್ತುತ ನಾವು ಎಷ್ಟೇ ಮುಂದುವರಿದರೂ, ವಿಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ ಜಾನಪದ ಬೇಕೇಬೇಕು. ಹೀಗಾಗಿ ಜಾನಪದ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಅಪರ ಡಿಸಿ ಶಿವಕುಮಾರ ಶೀಲವಂತ ಹೇಳಿದರು. ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ಈ ಹಿಂದೆ ಮೊಬೈಲ್ಗಳು ಇರಲಿಲ್ಲ. ಹೀಗಾಗಿ ಜಾನಪದ ಆಟಗಳನ್ನು ಆಡುತ್ತಿದ್ದರು. ಆದರೆ ಇಂದು ಎಲ್ಲ ಆಟಗಳು ಮೊಬೈಲ್ನಲ್ಲಿ ತಂದಿರುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿಗೊಳ್ಳತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಊಟೋಪಚಾರ, ಉಡುಗೆ-ತೊಡುಗೆಯಲ್ಲಿ ಜಾನಪದ ಸಂಸ್ಕೃತಿ ಉಳಿಸಬೇಕಾದದ್ದು ಎಲ್ಲರ ಹೊಣೆ. ನಾವು ಮನೆಯಲ್ಲಿ ಮೊಬೈಲ್ ನೋಡುತ್ತ ಕುಳಿತರೆ ಮಕ್ಕಳು ಅದನ್ನೇ ಮಾಡುತ್ತಾರೆ. ನಮ್ಮ ದಿನನಿತ್ಯದ ಚಟುವಟಿಕೆ ಜಾನಪದ ಸಂಸ್ಕೃತಿಯಲ್ಲಿ ಮಾಡಿದರೆ ಮಕ್ಕಳು ಅದನ್ನು ಅನುಕರಣೆ ಮಾಡುತ್ತಾರೆ ಎಂದರು.
ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ: ಸಮ್ಮೇಳನಾಧ್ಯಕ್ಷೆ ಉಷಾ ಪ್ರಭಾಕರ ಅವರ ಭವ್ಯ ಮೆರವಣಿಗೆ ಅಲಂಕೃತ ಸಾರೋಟಿನಲ್ಲಿ ನಡೆಯಿತು. ಹಿರಿಯ ಚಿಂತಕಿ ಗುರಮ್ಮ ಸಿದ್ದ್ಧಾರಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಜನವಾಡ ರಸ್ತೆಯ ಜಾನಪದ ವಿವಿ ಪ್ರಾದೇಶಿಕ ಕೇಂದ್ರದ ಮೂಲಕ ಅಂಬೇಡ್ಕರ್ ವೃತ್ತದಿಂದ ಕನರ್ಾಟಕ ಸಾಹಿತ್ಯ ಸಂಘದ ಸಮ್ಮೇಳನ ಮಂಟಪದವರೆಗೆ ನಡೆಯಿತು. ಮೆರವಣಿಯುದ್ದಕ್ಕೂ ಭೂತೇರ ಪದ, ಹಲಗೆ ಪ್ರದರ್ಶನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಸಕರ್ಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಮನೋಜಕುಮಾರ ಕುಲಕಣರ್ಿ, ಲುಂಬಿಣಿ ಗೌತಮ, ಪ್ರೇಮಾ ಶಿವಪುಜೆ, ವಿಜಯಲಕ್ಷ್ಮೀ ಚಾರಿ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಬಸವರಾಜ ರುದನೂರ, ಪ್ರಭಾಕರ ಕೆ.ಎಸ್., ಪ್ರತಿಭಾ ಚಾಮಾ, ಸವಿತಾ ಸಾಕೋಳೆ, ವೈಜಿನಾಥ ಪಾಟೀಲ್ ಇತರರಿದ್ದರು.
ಗ್ರಾಮೀಣ ಜನ ಅನಕ್ಷರಸ್ಥರಾಗಿದ್ದರೂ ಅಪ್ರತಿಮ ಹಾಡುಗಾರರಾಗಿದ್ದರು. ವಿವಿಧ ಕಲೆಗಳಲ್ಲಿ ಪರಿಣತಿ ಸಾಧಿಸಿದ್ದರು. ತಾವು ಪಟ್ಟ ಕಷ್ಟ, ಸುಖಗಳನ್ನು ಹಾಡು, ರಾಗವಾಗಿ ಹೊರಹಾಕಿದರು. ನಮ್ಮ ಕಲ್ಪನೆಗೆ ನಿಲುಕಲಾರದ ರೀತಿಯಲ್ಲಿ ಹಿರಿಯರು ಜಾನಪದ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಎಲ್ಲ ಸಾಹಿತ್ಯಗಳ ತಾಯಿ ಜಾನಪದ.
| ಉಷಾ ಪ್ರಭಾಕರ, ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ