ಜಿಲ್ಲೆ

ಬೀದರ್​ ಗ್ರಾಮೀಣ ಭಾಗಕ್ಕೂ ಕರೊನಾ ಎಂಟ್ರಿ

ಬೀದರ್: ನಗರದ ಓಲ್ಡ್ ಸಿಟಿಯಲ್ಲಿ ತನ್ನ ಕೆನ್ನಾಲಿಗೆ ಚಾಚುತ್ತಿರುವ ಕರೊನಾ, ಇದೀಗ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟು ಜನರ ನೆಮ್ಮದಿ ಹಾಳು ಮಾಡಿದೆ. ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದ ಮಹಿಳೆಗೆ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದ್ದು, ನಗರ, ಪಟ್ಟಣಗಳಿಗೆ ಸೀಮಿತವಾಗಿದ್ದ ಮಹಾಮಾರಿಯು ಗ್ರಾಮೀಣ ಭಾಗಕ್ಕೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಗುರುವಾರ ಜಿಲ್ಲೆಯಲ್ಲಿ 7 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇವರಲ್ಲಿ ಬೀದರ್​ನ ಗೋಲೇಖಾನಾ ಹಾಗೂ ಮನಿಯಾರ್ ತಾಲೀಮ್ನ ಆರು ಮಂದಿ ಹಾಗೂ ಹುಣಸಗೇರಾದ ಮಹಿಳೆ ಸೇರಿದ್ದಾರೆ. ಮಹಿಳೆಯು ಮುಂಬೈನಿಂದ ಬಂದಿರುವ ಕಾರಣಕ್ಕೆ ಸೋಂಕಿತಳಾದರೆ, ಉಳಿದವರು ಸೋಂಕುಪೀಡಿತ ಪ್ರದೇಶ (ಕಂಟೇನ್ಮೆಂಟ್ ಜೋನ್) ಆದ ನಗರದ ಓಲ್ಡ್ ಸಿಟಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಗೆ ಮುಂಬೈ, ಪುಣೆ ಇತರ ಕಡೆಗಳಿಂದ ಸಹಸ್ರಾರು ಜನರು ಆಗಮಿಸಿದ್ದಾರೆ. ಹೀಗೆ ಬಂದವರಲ್ಲಿ ಕರೊನಾ ಪಾಸಿಟಿವ್ ಬರುತ್ತಿರುವುದು ಭೀತಿಗೆ ಕಾರಣವಾಗಿದೆ. ಒಂದೆಡೆ ತಬ್ಲಿಘಿ ಸಂಪರ್ಕದಿಂದ ಓಲ್ಡ್ ಸಿಟಿ ಹಾಟ್ಸ್ಪಾಟ್ ಆಗಿ ಬದಲಾದರೆ, ಈಗ ಮಹಾರಾಷ್ಟ್ರದಿಂದ ಬಂದವರಿಂದಲೂ ಆಪತ್ತು ಸೃಷ್ಟಿ ಆಗುತ್ತಿರುವುದು ಜನರಲ್ಲಿ ತಲ್ಲಣ ಮೂಡಿಸಿದೆ.
ಹತ್ತು ದಿನಗಳಿಂದ ಜಿಲ್ಲೆಯಲ್ಲಿ ಕರೊನಾರ್ಭಟ ಹೆಚ್ಚಿದೆ. ಬುಧವಾರ ಒಂದೇ ದಿನ ದಾಖಲೆಯ 12 ಪಾಸಿಟಿವ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಗುರುವಾರ ಮತ್ತೆ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಮೇ 4ಕ್ಕೆ 7 ಮಂದಿಗೆ, 9ರಂದು ಮೂವರು, 11 ಹಾಗೂ 12ರಂದು ತಲಾ ಇಬ್ಬರಿಗೆ ಮಹಾಮಾರಿ ವಕ್ಕರಿಸಿದೆ. ಕಳೆದ 10 ದಿನಗಳಲ್ಲಿ 30 ಮಂದಿಗೆ ಸೋಂಕು ತಗುಲಿರುವುದು ಮುಂದಿನ ದಿನದ ಇನ್ನಷ್ಟು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ದಿನೇದಿನೆ ವೈರಸ್ ತನ್ನ ಕದಂಬಬಾಹು ಚಾಚುತ್ತಲೇ ಸಾಗಿದ್ದರಿಂದ ಇನ್ನೆಷ್ಟು ಜನರು ಬಾಧಿತರಾಗುತ್ತಾರೋ ಎಂಬ ಆತಂಕ ಕಾಡುತ್ತಿದೆ.
ನವದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ಹೋಗಿದ್ದ ಜಿಲ್ಲೆಯ 10 ಜನರಲ್ಲಿ ಕಳೆದ ಏಪ್ರಿಲ್ 1ಕ್ಕೆ ಕರೊನಾ ಪಾಸಿಟಿವ್ ಬಂದಿತ್ತು. ಇವರಲ್ಲಿ ಬೀದರ್ ಓಲ್ಡ್ ಸಿಟಿಯ 8 ಜನರಿದ್ದರೆ, ಬಸವಕಲ್ಯಾಣ ನಗರ ಹಾಗೂ ಮನ್ನಾಎಖೇಳ್ಳಿ ಪಟ್ಟಣದ ತಲಾ ಒಬ್ಬರು ಇದ್ದರು. ನಂತರ ಈ ಸೋಂಕು ಬೀದರ್ ನಗರಕ್ಕೆ ಸೀಮಿತವಾಗಿತ್ತು. ಈಗ ಹುಣಸಗೇರಾ ಮಹಿಳೆಯಲ್ಲಿ ಪಾಸಿಟಿವ್ ಬಂದ ನಂತರ ಗ್ರಾಮೀಣ ಭಾಗಗಳೂ ಸುರಕ್ಷಿತವಲ್ಲ ಎಂಬ ಆತಂಕ ಮೂಡಿಸಿದೆ. ವಾರದಿಂದ ಹೆಚ್ಚುತ್ತಿರುವ ಸೋಂಕು ಹಾಗೂ ಗ್ರಾಮೀಣ ಭಾಗಕ್ಕೆ ವಿಸ್ತರಣೆ ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವು ತಂದಿದೆ.