ಬೀದರ್: ನಗರ ಹೊರವಲಯದ ರಿಂಗ್ರೋಡ್ ಡಿವೈಡರ್ ಮಧ್ಯೆ ಅಲಂಕಾರಿಕ ಹೂವಿನ ಸಸಿಗಳನ್ನು ನೆಟ್ಟು ಸುಂದರೀಕರಣಗೊಳಿಸುವ ಯೋಜನೆ ಕೈಗೆತ್ತಿಕೊಂಡಿರುವ ಜಿಲ್ಲಾಡಳಿತ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಬೆಳೆದಿರುವ ಮುಳ್ಳು, ಕಂಟಿ ತೆಗೆಯುವ ಶ್ರಮದಾನ ಅಭಿಯಾನಕ್ಕೂ ಚಾಲನೆ ನೀಡಿದೆ.
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆಸಕ್ತಿ ಫಲವಾಗಿ 19 ಕಿಲೋ ಮೀಟರ್ ರಿಂಗ್ರೋಡ್ ಸುಂದರೀಕರಣ ನಡೆದಿದೆ. ದೇವ ದೇವ ವನದಿಂದ ಚಿಕ್ ಪೇಟ್ ಸೇರುವ ರಸ್ತೆಯಲ್ಲಿ ಮೊದಲ ಹಂತದಲ್ಲಿ ಕೆಲಸ ಆರಂಭಿಸಲಾಗಿದೆ. ಇಲ್ಲಿ ಆಕಾಶ ಮಲ್ಲಿಗೆ, ಸಿಲ್ವರ್ ಓಕ್, ಟೆಕೊಮಾ ಇತರ ಕಣ್ಮನ ಸೆಳೆಯುವ ಸಸಿಗಳನ್ನು ನೆಡಲಾಗುತ್ತಿದೆ. ಡಿವೈಡರ್ ಉದ್ದಕ್ಕೂ ವ್ಯಾಪಕವಾಗಿ ಮುಳ್ಳು, ಕಂಟಿ ಇತರ ಗಿಡಗಳು ಬೆಳೆದಿದ್ದವು. ಇವುಗಳನ್ನು ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಚಯಂ ಸೇವಕರ ಶ್ರಮದಾನದಿಂದ ತೆಗೆಯಲಾಗುತ್ತಿದೆ.
ಡಿಸಿ ರಾಮಚಂದ್ರನ್ ಸ್ವತಃ ಭಾನುವಾರ ಕಳೆ ತೆಗೆದು ಸಸಿ ನೆಟ್ಟು ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿ ಭಾನುವಾರ ಬೆಳಗ್ಗೆ 7ರಿಂದ 10ರವರೆಗೆ ಇಲ್ಲಿ ಶ್ರಮದಾನ ನಡೆಯಲಿದೆ. ಹೆಚ್ಚಿನ ಸಂಘ-ಸಂಸ್ಥೆ ಸ್ವಯಂ ಸೇವಕರು ಭಾಗಿಯಾಗಿ ನಮ್ಮ ಬೀದರ್- ಸುಂದರ ಬೀದರ್ ಮಾಡೋಣ ಬನ್ನಿ ಎಂದು ಮನವಿ ಮಾಡಿದರು.
ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅಭಿಯಾನದಲ್ಲಿ ಭಾಗಿಯಾಗಿ ಸಸಿ ನೆಟ್ಟರು. ಜಿಲ್ಲಾಡಳಿತ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಟೀಮ್ ಯುವಾ, ರೋಟರಿ ಬೀದರ್ ನ್ಯೂ ಸೆಂಚ್ಯೂರಿ, ರಿಶೈನ್, ಬೀದರ್ ಯುಥ್ ಎಂಪಾವರ್ಮೆಂಟ್ ಅಸೋಸಿಯೇಷನ್, ಜಿಎನ್ ಫೌಂಡೇಷನ್ ಸೇರಿ ವಿವಿಧ ಸಂಸ್ಥೆಗಳ ಸ್ವಯಂ ಸೇವಕರು, ಎಸಿ ಗರೀಮಾ ಪನ್ವಾರ್, ನಗರಸಭೆ ಎಇಇ ರಾಜಶೇಖರ ಮಠ, ವಲಯ ಅರಣ್ಯಾಧಿಕಾರಿ ಶಿವಕುಮಾರ ರಾಠೋಡ್ ಇತರರಿದ್ದರು.
ಜನರ ಸಹಕಾರ, ಸಹಭಾಗಿತ್ವ ಇದ್ದರೆ ಯಾವುದೇ ಕೆಲಸ ಯಶಸ್ಸು ಕಾಣುತ್ತದೆ. ರಿಂಗ್ರೋಡ್ ಮಾತ್ರವಲ್ಲ, ಬೀದರ್ ನಗರ ಇತರ ಪಟ್ಟಣಗಳು ಸುಂದರೀಕರಣ ಆಗಬೇಕು ಎಂಬ ಧ್ಯೇಯ ನಮ್ಮದು. ಪ್ರತಿಯೊಬ್ಬರೂ ಸಾಮಾಜಿಕ ಹಾಗೂ ಪರಿಸರ ಕಾಳಜಿ ಮೆರೆದರೆ ಸುಂದರೀಕರಣ ಕನಸು ಬೇಗ ನನಸಾಗಬಲ್ಲದು.
| ರಾಮಚಂದ್ರನ್, ಜಿಲ್ಲಾಧಿಕಾರಿ