ಜಿಲ್ಲೆ

ಬೀದರ್ ಭಾಷೆಗಿದೆ ವಿಶಿಷ್ಟ ಸೊಗಡು

ಬೀದರ್: ಬೀದರ್ ಭಾಷೆ ಅಚ್ಚ ಕನ್ನಡವಾಗಿದೆ. ಅದಕ್ಕೆ ವಿಶಿಷ್ಟ ಸೊಗಡು ಎದೆ ಎಂದು ಕಿರುತೆರೆ ನಟಿ ರಂಜಿನಿ ರಾಘವನ್ ಹೇಳಿದರು.
ಬೀದರ್ ತಾಲೂಕಿನ ಅಲಿಯಂಬರನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವಿಲ್ಲ. ಅಲ್ಲಿ ಇರುವುದು ಕಂಗ್ಲೀಷ್ ಮಾತ್ರ. ಭಾಷೆಯೇ ಅಸ್ತಿತ್ವ ಆಗಿರುವ ಕಾರಣ ಯಾರು ಏನೇ ಅಂದರೂ, ಬೀದರ್ ಜನ ತಮ್ಮ ಭಾಷೆ ಬಳಸಲು ಮರೆಯಬಾರದು ಎಂದರು.
ಬೀದರ್ ಭಾಷೆ ನನಗೆ ತುಂಬಾ ಇಷ್ಟವಿದೆ. ಹೀಗಾಗಿ ಇಲ್ಲಿಗೆ ಬಂದಾಗ ಹೊಸ ಹೊಸ ಪದಗಳನ್ನು ಕಲಿಯುತ್ತೆನೆ. ಅನೇಲ ಸಲ ಇಲ್ಲಿಗೆ ಬಂದಿರುವೆ ಎಂದು ಹೇಳಿದರು.
ಬಸವಾದಿ ಶರಣರ ಪುಣ್ಯ ಭೂಮಿ ಇದಾಗಿದೆ. ವಚನ ಸಾಹಿತ್ಯ ಕೊಟ್ಟ ಶಿವಶರಣರ ನಡೆ ನುಡಿ ಒಂದೇ ಆಗಿತ್ತು. ಅದನ್ನು ಅಭಿಮಾನದಿಂದ ಗೌರವಿಸಬೇಕು ಎನ್ನುತ್ತಾ ಬಸವಣ್ಣನವರ ವಚನ ಗಾಯನ ಮಾಡಿ ಗಮನ ಸೆಳೆದರು.
ಶಾಸಕ ರಹೀಮ್ ಖಾನ್ ಮಾತನಾಡಿ, ಕನ್ನಡ ಕಾರ್ಯಕ್ರಮಗಳಿಗೆ ನಾನು ಸದಾ ಸಹಾಯಹಸ್ತ ನೀಡುವೆ. ನನ್ನ ಕ್ಷೇತ್ರದಲ್ಲಿ ಸಮ್ಮೇಳನ ಜರಗುತ್ತಿರುವುದು ನನಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು
ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕನ್ನಡಪರ ಕೆಲಸಗಳಿಗೆ ನಾನು ಸಹಾಯ ಮಾಡುವೆ. ಜಿಲ್ಲಾ ಕನ್ನಡ ಭವನಕ್ಕೆ ಇನ್ನೂ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನ ಮಾಡುವೆ ಎಂದು ಹೇಳಿದರು.
ಸಾಹಿತಿ ಬಸವರಾಜ ಬಲ್ಲೂರ್ ಸಮಾರೋಪ ಭಾಷಣ ಮಾಡಿದರು. ಶಿವಾನಿ ಸ್ವಾಮಿ ಸಂಗೀತ ರಸಮಂಜರಿ, ವೈಜಿನಾಥ ಸಜ್ಜನಶೆಟ್ಟಿ ಹಾಸ್ಯ ಹಾಗೂ ರಾಣಿ ಸತ್ಯಮೂರ್ತಿ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಚಂದ್ರಕಾಂತ ಮಸಾನಿ, ದೇವೇಂದ್ರ ಕರಂಜೆ, ಸಂತೋಷ ಪಾಟೀಲ್, ಶರತ ಬಿ. ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೌರವ ಕಾರ್ಯದರ್ಶಿಗಳಾದ ಶಿವಕುಮಾರ ಕಟ್ಟೆ, ಟಿ.ಎಂ. ಮಚ್ಚೆ, ಶಿವಶಂಕರ ಟೋಕರೆ, ಗ್ರಾಪಂ ಅಧ್ಯಕ್ಷ ಮಹಾದೇವ ಬಿರಾದಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಪಾಟೀಲ್, ಪ್ರಮುಖರಾದ ಬಾಬುರಾವ್ ದಾನಿ, ಸಹಜಾನಂದ ಕಂದಗೂಳೆ, ಪೀರಪ್ಪ ಯರನಳ್ಳಿ, ದೀಪಕ ಗಾದಗೆ, ಕಾಮಶೆಟ್ಟಿ ಘೋಡಂಪಳ್ಳಿ, ರಿತೇಶ್ ದೇಶಮುಖ, ರಾಜೇಂದ್ರ ಪೂಜಾರಿ, ಸಿದ್ದು ಲವಟೆ, ಅಶೋಕ ದಿಡಗೆ, ಸಿದ್ದಾರೂಢ ಭಾಲ್ಕೆ, ಆಕಾಶ ಕೋಟೆ, ಬಸವರಾಜ ಬಶೆಟ್ಟಿ ಇತರರಿದ್ದರು. ಕಸಾಪ ತಾಲೂಕಾಧ್ಯಕ್ಷ ಎಂ.ಎಸ್. ಮನೋಹರ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ನಿರೂಪಣೆ ಮಾಡಿದರು. ಜಗನ್ನಾಥ ಶಿವಯೋಗಿ ವಂದಿಸಿದರು.

ಸಮ್ಮೇಳನದ ನಿರ್ಣಯ
ಸಮ್ಮೇಳನದಲ್ಲಿ ಒಟ್ಟು ಆರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಬೀದರ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕನ್ನಡ ಭವನದ ಬಾಕಿ ರೂ. 1 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಜಿಲ್ಲೆಯ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು. ಪದೇ ಪದೆ ಗಡಿ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಕನ್ನಡ ಅನುಷ್ಠಾನ ಮಸೂದೆ ತಕ್ಷಣ ಜಾರಿಗೊಳಿಸಬೇಕು. ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬಿತ್ಯಾದಿ ನಿರ್ಣಯ ತೆಗೆದುಕೊಳ್ಳಲಾಗಿದೆ.