ಬೀದರ್: ಶರಣರ ಕರ್ಮಭೂಮಿ ಬಸವಕಲ್ಯಾಣದಿಂದ ಆರಂಭವಾದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಎರಡನೇ ದಿನವಾದ ಶನಿವಾರ ಜಿಲ್ಲಾದ್ಯಂತ ಸಂಚರಿಸಿತು. ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ ಅಬ್ಬರ ಜೋರಾಗಿತ್ತು. ಚುನಾವಣೆ ಹೊಸ್ತಿಲಲ್ಲಿ ಕೇಸರಿ ಪಡೆಯಲ್ಲಿ ಈ ಯಾತ್ರೆ ಫುಲ್ ಜೋಶ್ ಗೆ ಕಾರಣವಾಯಿತು.
ಕಲ್ಯಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಯಾತ್ರೆಗೆ ಚಾಲನೆ ನೀಡಿದ್ದರು. ನಂತರ ಹುಮನಾಬಾದ್, ಭಾಲ್ಕಿಯಲ್ಲಿ ರೋಡ್ ಶೋ ಹಾಗೂ ವೇದಿಕೆ ಕಾರ್ಯಕ್ರಮ ನಡೆದವು. ಶನಿವಾರ ಔರಾದ್, ಬೀದರ್ ಉತ್ತರ ಹಾಗೂ ಬೀದರ್ ದಕ್ಷಿಣ ಕ್ಷೇತ್ರಗಳಲ್ಲಿ ಯಾತ್ರೆ ಜರುಗಿತು. ಮೂರೂ ಕ್ಷೇತ್ರಗಳಲ್ಲಿ ರೋಡ್ ಶೋ ಜೋರ್ದಾರ್ ನಡೆದವು. ದಾರಿಯುದ್ದಕ್ಕೂ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಸ್ಥಳೀಯರು, ಕಾರ್ಯಕರ್ತರು ನಿಂತು ಜೈಕಾರ ಕೂಗುತ್ತಿದ್ದ ದೃಶ್ಯ ಕಂಡುಬಂತು. ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರದ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್ ಇತರರು ಜನರತ್ತ ಕೈ ಬೀಸಿ, ನಮಸ್ಕರಿಸುತ್ತಿದ್ದರು.
ಮಧ್ಯಾಹ್ನ ನಗರಕ್ಕೆ ಆಗಮಿಸಿದ ಯಾತ್ರೆಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು. ಇಲ್ಲಿನ ಸಾಯಿ ಸ್ಕೂಲ್ ಹತ್ತಿರದಿಂದ ಯಾತ್ರೆ ಶುರುವಾಯಿತು. ಯಾತ್ರೆ ನಿಮಿತ್ತ ಸಿದ್ಧಪಡಿಸಿದ ವಿಶೇಷ ಬಸ್ನಲ್ಲಿ ಮಾಜಿ ಸಿಎಂ ಶೆಟ್ಟರ್ ಇತರರು ನಿಂತು ಜನರತ್ತ ಕೈ ಬೀಸಿದರು. ಕಳಸ, ಕುಂಭಮೇಳದೊಂದಿಗೆ ಮಹಿಳೆಯರು ಯಾತ್ರೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದರು. ರೋಟರಿ ವೃತ್ತ, ಮೋಹನ್ ಮಾರ್ಕೆಟ್, ಡಿಸಿ ಕಚೇರಿ, ಶಿವಾಜಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಚಿದ್ರಿ ರಸ್ತೆವರೆಗೆ ರೋಡ್ ಶೋ ನಡೆಯಿತು.
ಎಂಎಲ್ಸಿ ರಘುನಾಥರಾವ್ ಮಲ್ಕಾಪುರೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ರಾಜ್ಯ ಹಜ್ ಕಮಿಟಿ ಅಧ್ಯಕ್ಷ ರೌಫೊದ್ದೀನ್ ಕಚೇರಿವಾಲೆ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಗುರುನಾಥ ಕೊಳ್ಳುರ್, ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ಪ್ರಕಾಶ ಟೊಣ್ಣೆ, ಶಿವರಾಜ ಗಂದಗೆ, ಶಶಿಧರ ಹೊಸಳ್ಳಿ, ಸೋಮಶೇಖರ ಪಾಟೀಲ್ ಗಾದಗಿ, ರಾಜೇಂದ್ರ ಪೂಜಾರಿ ಇತರರಿದ್ದರು.