ಬೀದರ್: ಬೀದರ್ ನಿಂದ ತಿರುಪತಿಗೆ ವಿಮಾನ ಸೇವೆ ಆರಂಭಕ್ಕೆ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದ್ದು, ಜಿಲ್ಲೆಯಿಂದ ಬಾಲಾಜಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಸದ್ಯ ಬೀದರ್-ಬೆಂಗಳೂರಿಗೆ ಸಂಚರಿಸುವ ವಿಮಾನವನ್ನು ತಿರುಪತಿವರೆಗೆ ವಿಸ್ತರಿಸಲಾಗಿದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿದ್ದು, ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನಯಾನ ಸೇವೆ ಇರಲಿದೆ ಎಂದು ಹೇಳಿದ್ದಾರೆ.
ಸೋಮವಾರ ಮತ್ತು ಶುಕ್ರವಾರ ಬೀದರ್ನಿಂದ ಸಂಜೆ 5.30ಕ್ಕೆ ಹೊರಟು ಬೆಂಗಳೂರಿಗೆ 6.45ಕ್ಕೆ ತಲುಪಿ, ಅಲ್ಲಿಂದ ರಾತ್ರಿ 7.10ಕ್ಕೆ ಬಿಟ್ಟು 8ಕ್ಕೆ ತಿರುಪತಿ ತಲುಪುತ್ತದೆ. ನಂತರ ಅಂದೇ ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಟು ರಾತ್ರಿ 9.15ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಮರುದಿನ ಮತ್ತೆ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರ್ ಗೆ ವಿಮಾನ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ಗುರುವಾರ, ಶನಿವಾರ ಮತ್ತು ಭಾನುವಾರ ಬೀದರ್ ನಿಂದ ಸಂಜೆ 4.50ಕ್ಕೆ ಹೊರಟು ಬೆಂಗಳೂರಿಗೆ 6.05ಕ್ಕೆ ತಲುಪಿ ಅಲ್ಲಿಂದ 6.30ಕ್ಕೆ ಹೊರಟು ತಿರುಪತಿಗೆ ರಾತ್ರಿ 7.20ಕ್ಕೆ ತಲುಪಲಿದೆ. ತಿರುಪತಿಯಿಂದ ಮತ್ತೆ ರಾತ್ರಿ 7.45ಕ್ಕೆ ಹೊರಟು ಬೆಂಗಳೂರಿಗೆ 8.35ಕ್ಕೆ ತಲುಪಲಿದೆ. ಮರುದಿನ ಮಧ್ಯಾಹ್ನ ಎಂದಿನಂತೆ ಅಲ್ಲಿಂದ ಬೀದರ್ ಗೆ ವಿಮಾನ ಸಂಚರಿಸಲಿದೆ. ತಿರುಪತಿಗೆ ವಿಮಾನಯಾನದ ಸೇವೆ ಆ.24ರಿಂದ ಪ್ರಾರಂಭವಾಗಲಿದೆ. ಬೀದರ್ ಲೋಕಸಭೆ ಕ್ಷೇತ್ರದ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖೂಬಾ ಮನವಿ ಮಾಡಿದ್ದಾರೆ.